Advertisement
ದೊಡ್ಡತೋಟ-ಮರ್ಕಂಜ ಸಂಪರ್ಕ ಮಾರ್ಗದ ನಡುವೆ ದೊಡ್ಡತೋಟದಿಂದ ಸ್ವಲ್ಪ ಮುಂದಕ್ಕೆ ಚೆನ್ನಡ್ಕ (ನಳಿಯೂರು) ಎಂಬಲ್ಲಿ ಕಿರು ತೋಡೊಂದು ಹರಿಯುತ್ತದೆ. ಈ ತೋಡು ಕಂದಡ್ಕ ಸೇರುವ ಮಧ್ಯೆ ಮೂರು ವರ್ಷಗಳ ಅವಧಿಯಲ್ಲಿ ಮೂರು ಕಡೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದೇ ತೋಡಿಗೆ ಮೂರು ಅಣೆಕಟ್ಟು ನಿರ್ಮಾಣವಾಗಿರುವುದು ಈ ಭಾಗದ ನಾಗರಿಕರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿವೆ.
Related Articles
ಇದೇ ತೋಡಿನ ಮೇಲ್ಭಾಗದಲ್ಲಿ ಸುಮಾರು 500 ಮೀ. ದೂರದ ಅಂತರದಲ್ಲಿ ಈ ಹಿಂದೆಯೇ ಒಂದು ಕಿಂಡಿ ಅಣೆಕಟ್ಟು ನಿರ್ಮಿಸಿ, ಕಾಮಗಾರಿ ಮಳೆಯಿಂದ ಪೂರ್ಣವಾಗದೆ ಪ್ರಯೋಜನಕ್ಕೆ ಸಿಗದೆ ನಿಂತಿದೆ. ಇದೀಗ ಮತ್ತೆ ಮತ್ತೆ ಒಂದೇ ತೋಡಿನ ಅಕ್ಕಪಕ್ಕದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಅವೈಜ್ಞಾನಿಕ ಯೋಜನೆ ಎನ್ನುತ್ತಾರೆ ಸ್ಥಳೀಯರು.
Advertisement
ಕೂಲಿ ಪಾವತಿಯಾಗಿಲ್ಲಈ ಕಿಂಡಿ ಅಣೆಕಟ್ಟಿನ ನಿರ್ಮಾಣ ಹಂತದಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ಬಳಸಿಕೊಂಡ 15 ಮಂದಿ ಮಹಿಳಾ ಕೂಲಿ ಕೆಲಸಗಾರರಿಗೆ ಇನ್ನೂ ವೇತನವನ್ನು ಪಾವತಿಸಿಲ್ಲ ಎಂಬ ಆರೋಪವೂ ಇದೆ. ಆಕ್ಷೇಪಣೆ
ಈಗ ನಡೆಯುತ್ತಿರುವ ಕಿರು ಅಣೆಕಟ್ಟು ನಿರ್ಮಾಣದ ಜಾಗಕ್ಕೆ ಸಂಬಂಧಿಸಿ ಪಕ್ಕದ ಕುಟುಂಬವೊಂದರ ಆಕ್ಷೇಪ ಇದೆ. ಕಮಲಾ ಎಂಬ ನಿವಾಸಿಗೆ ಸೇರಿದ ಸ್ಥಳದಲ್ಲಿ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಲು ಅವರ ಕುಟುಂಬ ಸಿದ್ಧತೆ ನಡೆಸುತ್ತಿದೆ. ಚೆನ್ನಡ್ಕ ಪರಿಸರದಲ್ಲಿ ಬೆರಳೆಣಿಕೆಯ ಎಸ್‌ಟಿ ಕುಟುಂಬಗಳು ಸಹಿತ ಮೂವತ್ತಕ್ಕೂ ಅಧಿಕ ಮನೆಗಳಿವೆ. ಇಲ್ಲಿ ಸಾರ್ವಜನಿಕ ಒಂದು ಬಾವಿ ಕೂಡ ಇದೆ. ಬಾವಿಯಲ್ಲಿ ನೀರು ಏರಿಕೆ ಆಗಬೇಕಿದ್ದರೆ ಈಗ ಇರುವ ಎರಡು ಕಿಂಡಿ ಅಣೆಕಟ್ಟುಗಳನ್ನೇ ಪೂರ್ಣಗೊಳಿಸಿ ಹಲಗೆ ಜೋಡಿಸಿ ನಿರ್ವಹಣೆ ನಡೆಸುತ್ತ ಬಂದರೇ ಯಥೇತ್ಛ ನೀರು ಲಭ್ಯವಾಗಲಿದೆ. ಚುನಾವಣೆ ಅಸ್ತ್ರವಾಗಿ ಬಳಕೆ
ಪುಟ್ಟ ತೋಡಿನ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಆಗುತ್ತಿರುವುದು ರಾಜಕೀಯ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ಕೃಷಿಕರಿಗೆ ಜಲಸಂರಕ್ಷಣೆಯ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳು ಪ್ರಯೋಜನಕಾರಿ ಆಗಿದ್ದರೂ ಒಂದೇ ಕಡೆ ಒಂದೇ ತೋಡಿಗೆ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಹಿಂದೆ ಹಣ ಗಳಿಸುವ ಉದ್ದೇಶ ಅಡಗಿದೆ ಎಂಬ ಆರೋಪ- ಪ್ರತ್ಯಾರೋಪಗಳೂ ಕೇಳಿಬರುತ್ತಿವೆ. ಇದು ಚುನಾವಣೆ ಅಸ್ತ್ರವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ. ದಿಢೀರನೆ ಮಂಜೂರು
14 ವರ್ಷಗಳಿಂದ ನಮ್ಮ ಭಾಗಕ್ಕೆ ಯಾವುದೇ ಯೋಜನೆಗಳು ಮಂಜೂರಾತಿ ಆಗಿರಲಿಲ್ಲ. ಈ ಅವಧಿಯಲ್ಲಿ ಹಲವು ಸ್ಕೀಮುಗಳ ಮೂಲಕ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದೆವು. ಇತ್ತೀಚೆಗೆ ಕೇಂದ್ರದ ವಿಶೇಷ ಅನುದಾನದಲ್ಲಿ ಹಣ ಒದಗಿ ಬಂತು. ಹೀಗಾಗಿ ಇದೀಗ ಸ್ವಲ್ಪ ದೊಡ್ಡ ಗಾತ್ರದ ಕಿಂಡಿ ಅಣೆಕಟ್ಟು ನಿರ್ಮಾಣ ಆಗುತ್ತಿದೆ. ಇದನ್ನು ಸ್ಥಳಾಂತರಿಸಲು ನಿಯಮಾನುಸಾರ ಆಗದೆ ಇರುವುದರಿಂದ ಇಲ್ಲಿ ನಿರ್ಮಿಸಲಾಗುತ್ತಿದೆ.
– ಪದ್ಮನಾಭ ಚೆನ್ನಡ್ಕ, ಫಲಾನುಭವಿ ದೂರು ನೀಡುತ್ತೇವೆ
ಒಂದೇ ತೋಡಿಗೆ ಅವೈಜ್ಞಾನಿಕವಾಗಿ ಮೂರು ಅಣೆಕಟ್ಟುಗಳನ್ನು ನಿರ್ಮಿಸುವುದಕ್ಕೆ ನಮ್ಮ ವಿರೋಧವಿದೆ. ಅಣೆಕಟ್ಟು ನಿರ್ಮಿಸುವಾಗ ಜಾಗದ ಹಕ್ಕುದಾರೆ ನನ್ನ ತಾಯಿಯ ಅನುಮತಿ ಪಡೆದಿಲ್ಲ. ಹೀಗಾಗಿ ಅಲ್ಲಿ ಕಾಮಗಾರಿ ಮುಂದುವರಿಸಬಾರದು.ಈ ಕುರಿತು ಮುಂದಿನ ದಿನಗಳಲ್ಲಿ ಪೊಲೀಸರಿಗೆ ದೂರು ನೀಡುತ್ತೇವೆ.
– ಸುಂದರ
ಸ್ಥಳೀಯ ನಿವಾಸಿ ಬಾಲಕೃಷ್ಣ ಭೀಮಗುಳಿ