ಶ್ರೀನಗರ : ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಕೆ ಪಿ ರೋಡ್ ನಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಇಂದು ಬುಧವಾರ ಸಂಜೆ ನಡೆಸಿದ ಗುಂಡಿನ ದಾಳಿಗೆ ಮೂವರು ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದಾರೆ.
ಜಮ್ಮು ಕಾಶ್ಮೀರ ಎಸ್‌ಎಚ್‌ಓ ಮತ್ತು ಓರ್ವ ಸ್ಥಳೀಯ ಮಹಿಳೆ ಸೇರಿದಂತೆ ಇತರ ಮೂವರು ಉಗ್ರರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ವರದಿ ಸಿದ್ಧವಾಗುತ್ತಿರುವ ಹೊತ್ತಿನಲ್ಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿಯುತ್ತಿದೆ.
ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯನ್ನು ಪಾಕಿಸ್ಥಾನದ ಅಲ್ ಉಮರ್ ಮುಜಾಹಿದೀನ್ ಉಗ್ರ ಸಂಘಟನೆ ಹೊತ್ತು ಕೊಂಡಿದೆ. ಅನಂತ್‌ನಾಗ್ ನ ಚೀ ಗಾಲಿ ಸಮೀಪದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಉಗ್ರರ ಗುಂಡಿನ ದಾಳಿ ನಡೆದಿದೆ. ಎರಡು ವಾಹನಗಳಲ್ಲಿ ಬಂದ ಮುಸುಕುಧಾರಿ ಉಗ್ರರು ಬಿ/116ಬಿ ಎನ್ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು.
ಅನಂತನಾಗ್ ಪೊಲೀಸ್ ಠಾಣಾಧಿಕಾರಿ ಅರ್ಷದ್ ಅಹ್ಮದ್ ಅವರು ಉಗ್ರರ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಶ್ರೀನಗರ ಆಸ್ಪತ್ರೆಗೆ ಸೇರಿಸಲಾಗಿದೆ. ಇತರ ಗಾಯಾಳುಗಳನ್ನು ಅನಂತನಾಗ್‌ನ ಜಂಗ್ಲತ್ ಮಂಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಉಗ್ರರ ದಾಳಿ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸಂಪೂರ್ಣವಾಗಿ ಸುತ್ತುವರಿದಿವೆ. ಹೆಚ್ಚಿನ ಭದ್ರತಾ ಪಡೆಗಳು ಸ್ಥಳವನ್ನು ತಲುಪಿವೆ.