ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ ತಲಾ ಒಂದು ಕೋಟಿ ರೂ. ಅನುದಾನ ಮೀಸಲಿರಿಸುತ್ತಿದೆ. ಆದರೆ, ಇದರಲ್ಲಿ ನಯಾ ಪೈಸೆಯೂ ಫಲಾನುಭವಿಗಳನ್ನು ತಲುಪಿಲ್ಲ!
ಮಂಗಳಮುಖೀಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ 2016ರಲ್ಲಿ ಮೊದಲ ಬಾರಿಗೆ ಪಾಲಿಕೆಯು ವಿಶೇಷ ಯೋಜನೆಯಡಿ ಒಂದು ಕೋಟಿ ರೂ. ಬಿಡುಗಡೆ ಮಾಡಿತ್ತು. ನಂತರ ಪ್ರತಿ ವರ್ಷ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡುತ್ತಿದೆ. ವಿಶೇಷ ಸೌಲಭ್ಯದಡಿ ಇರುವ ವಿವಿಧ ಯೋಜನೆಗಳನ್ನು ಬಳಸಿಕೊಳ್ಳಲು ಮಂಗಳಮುಖೀರು ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಯೋಜನೆ ಬಳಸಿಕೊಳ್ಳುವ ಉದ್ದೇಶದಿಂದ ಮುಂದೆ ಬಂದಿರುವ ಮಂಗಳಮುಖೀಯರು ಸೂಕ್ತ ದಾಖಲೆ ನೀಡದೆ ಇರುವುದರಿಂದ ಅವರಿಗೆ ಹಣ ಬಿಡುಗಡೆ ಆಗುತ್ತಿಲ್ಲ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ವಾದ.
45 ಅರ್ಜಿಗಳು ತಿರಸ್ಕೃತ: ಬಿಬಿಎಂಪಿಗೆ ಇಲ್ಲಿಯವರೆಗೆ 45 ಮಂಗಳಮುಖೀಯರು, ವಿಶೇಷ ಯೋಜನೆಯಡಿ ಹಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇವರ್ಯಾರೂ ಸೂಕ್ತ ದಾಖಲೆ ನೀಡದ ಕಾರಣ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.ಅಲ್ಲದೆ, ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾಗಿದ್ದರೆ ಅಥವಾ ವಿಶೇಷ ಬೇಡಿಕೆಗಳು ಬಂದರೆ ಮಾಹಿತಿ ನೀಡುವಂತೆಯೂ ಬಿಬಿಎಂಪಿಯ ಎಂಟು ವಲಯಗಳ ಅಧಿಕಾರಿಗಳನ್ನು ಕೇಳಲಾಗಿದೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕಲ್ಯಾಣ ವಿಭಾಗದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಭಿನ್ನ ಬೇಡಿಕೆ; ಅಧಿಕಾರಿಗಳು ಪೇಚಿಗೆ: ಬಹುತೇಕ ಮಂಗಳಮುಖೀಯರು ಹಾಗೂ ಸಂಬಂಧಿತ ಸಂಘಟನೆಗಳು ಪಾಲಿಕೆಯಿಂದ ನಿರೀಕ್ಷಿಸುತ್ತಿರುವ “ಭಿನ್ನ ಬೇಡಿಕೆ’ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ. ಜೀವನ ಮಟ್ಟ ಸುಧಾರಿಸಿಕೊಳ್ಳುವುದಕ್ಕೆ ಲಿಂಗ ಪರಿವರ್ತನೆ ಅನಿವಾರ್ಯವಾಗಿದ್ದು, ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡುವಂತೆ ಮಂಗಳಮುಖೀಯರಿಂದ ಮನವಿ ಬರುತ್ತಿದ್ದು, ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎಂದು ತಿಳಿಯುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆಯ ವಿಶೇಷ ಯೋಜನೆಯಲ್ಲಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಹಣ ನೀಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಈ ಬೇಡಿಕೆಯನ್ನು ಮುಂದಿನ ಬಜೆಟ್‌ನಲ್ಲಿ ಸೇರಿಸಲು ಇರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಮಂಗಳಮುಖೀಯರು ಸೂಕ್ತ ದಾಖಲೆ ನೀಡದೆ ಇರುವುದರಿಂದ ಅವರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ದೂರುತ್ತಾರೆ. ಆದರೆ, ಮಂಗಳಮುಖೀಯರು ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸುತ್ತಾರೆ. ಮಂಗಳಮುಖೀಯೊಬ್ಬರು ಹೇಳುವಂತೆ “ಇಂಥದ್ದೇ ದಾಖಲೆ ಬೇಕು ಎಂದು ಅಧಿಕಾರಿಗಳು ಸರಿಯಾಗಿ ಹೇಳುವುದಿಲ್ಲ. ಕೆಲವರು ನಮ್ಮನ್ನು ಕೀಳಾಗಿ ಕಾಣುತ್ತಾರೆ. ಹೀಗಾಗಿ, ಇವರ ಅನುದಾನವೂ ಬೇಡ, ಸಹಾಯ ಕೇಳಿ ಅವಮಾನ ಅನುಭವಿಸುವುದೂ ಬೇಡ ಎಂದೆನಿಸಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಕೌಶಲ್ಯ ತರಬೇತಿ ನೀಡಿ : ಮಂಗಳಮುಖೀಯರಿಗೆ ಪಾಲಿಕೆಯಿಂದ ಆರ್ಥಿಕ ಸಹಾಯ ನೀಡುವ ಬದಲು, ಅವರಿಗೆ ಕೌಶಲ್ಯ ತರಬೇತಿ ನೀಡಲಿ ಎಂಬುದು ಸಂಗಮ ಹಾಗೂ ಸಮ್ಮಿಲನ ಸಂಸ್ಥೆ ಸಂಸ್ಥಾಪಕಿ ನಿಶಾ ಗುಳೂರು ಒತ್ತಾಯ. ಮಂಗಳಮುಖೀಯರಿಗೆ ಪಾಲಿಕೆಯಿಂದ ಬಿಡುಗಡೆ ಯಾಗುತ್ತಿರುವ ಅನುದಾನಕ್ಕೆ ಸಂಬಂಧಿಸಿದಂತೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ಆರ್ಥಿಕ ನೆರವು ನೀಡುವುದಕ್ಕಿಂತ ಕೌಶಲ್ಯ ತರಬೇತಿ ನೀಡಿದರೆ ಉತ್ತಮ. ಸಮಾಜದಲ್ಲಿ ಮಂಗಳಮುಖೀಯರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಬಹುತೇಕ ಕಂಪನಿಗಳು ಉದ್ಯೋಗ ನೀಡಲು ಮುಂದೆ ಬರುತ್ತಿವೆ. ಆದರೆ, ಮಂಗಳಮುಖೀಯರಿಗೆ ಕಂಪ್ಯೂಟರ್ ಹಾಗೂ ಸಾಮಾನ್ಯ ಇಂಗ್ಲಿಷ್ ಜ್ಞಾನದ ಕೊರತೆ ಇರುವುದರಿಂದ ಉದ್ಯೋಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೌಶಲ್ಯ ತರಬೇತಿ ನೀಡಿದರೆ, ಉದ್ಯೋಗಕ್ಕೆ ಸೇರಲ ಅಥವಾ ನಾವೇ ಸ್ಟಾರ್ಟ್‌ಅಪ್ ಆರಂಭಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.
ಮುಂಗಳಮುಖೀ ಸಮುದಾಯದೊಂದಿಗೆ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅವರ ಅಗತ್ಯ ಹಾಗೂ ನಿರೀಕ್ಷೆಗೆ ಅನುಗುಣವಾಗಿ ಅವರಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲೂ ಕ್ರಮ ತೆಗೆದುಕೊಳ್ಳಲಾಗುವುದು.
–ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
ಹಿತೇಶ್ ವೈ