Advertisement

ವಿಡಿಸಿಸಿ ಬ್ಯಾಂಕ್‌ಗೆ 3 ಕೋಟಿ ರೂ. ದೋಖಾ

01:17 PM Jun 23, 2022 | Team Udayavani |

ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 8 ಜನರು 3.15 ಕೋಟಿ ರೂ. ಸಾಲ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಆರೋಪದಲ್ಲಿ 22 ಜನರ ವಿರುದ್ಧ ಇದೀಗ ನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

Advertisement

ಹನುಮಂತ ಮುಂಜಾನೆ, ವೆಂಕಟೇಶ ಕೋರ್ಪಡೆ, ಗಜಾನಂದ ಬೀಸಣಿಕೆ, ರಾಘವೇಂದ್ರ ಚವನ, ಭಾರತಿ ಇಂಡಿ, ಸೈಯದ್‌ ಆರೀಫ್‌, ಸೈಫುದ್ದೀನ್‌ ಶೇಖ್‌ ಹಾಗೂ ನಜೀರ್‌ ಅಹ್ಮದ್‌ ಶೇಖ್‌ ಎಂಬವರ ವಿರುದ್ಧ ದೂರು ದಾಖಲಾಗಿದೆ. ಇದಲ್ಲದೇ ಸದರಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದ ಪ್ರಕರಣದಲ್ಲಿ ಜಾಮೀನು ಹಾಕಿದ 14 ಜನರ ವಿರುದ್ಧವೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧಿಕಾರಿಗಳು ನಗರದ ಗಾಂಧಿ ಚೌಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾಗಿದ್ದು ತಿಳಿಯುತ್ತಲೇ ಸದರಿ ಪ್ರಕರಣದ ಆರೋಪಿಗಳಲ್ಲಿ ಕೆಲವರು ಜಾಮೀನು ಪಡೆಯುಲು ಮಂದಾಗಿದ್ದಾರೆ ಎಂದೂ ಹೇಳಲಾಗಿದೆ.

ಸಾಲ ಪಡೆಯಲು ವಂಚಕ ಆರೋಪಿಗಳು ಹೆಸರೇ ಇಲ್ಲದ ಬೇರೊಬ್ಬರ ಹೆಸರಿನಲ್ಲಿ ಸಾಲ ಪಡೆಯುವುದು, ಹೆಸರೇ ಇಲ್ಲದವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆಯುವುದು, ಆಸ್ತಿ ಇಲ್ಲದವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣದಲ್ಲಿ ನಕಲಿ ಆಧಾರ್‌ ಕಾರ್ಡ್‌ ಸೃಷ್ಟಿ, ಆಸ್ತಿಗಳನ್ನು ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದಂತೆ ಅಸಲಿ ದಾಖಲೆಗಳನ್ನು ಹೋಲುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲಾಗಿದೆ.

ಸದರಿ 8 ಆರೋಪಿಗಳು ಹಲವು ವರ್ಷಗಳ ಹಿಂದೆ ನಕಲಿ ದಾಖಲೆಗಳನ್ನು ನೀಡಿ 3.15 ಕೋಟಿ ರೂ. ಸಾಲ ಪಡೆದಿದ್ದರು. ವರ್ಷಗಳೇ ಕಳೆದರೂ ಸಾಲ ಮರು ಪಾವತಿಗೆ ಕಂತುಗಳನ್ನು ಕಟ್ಟಿರಲಿಲ್ಲ. ಹೀಗಾಗಿ ಸಹಜವಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧಿಕಾರಿಗಳು ಸಾಲ ಮರು ಪಾವತಿಸುವಂತೆ ಸಂಬಂಧಿಸಿದವರ ಹೆಸರಿನಲ್ಲಿ ನೋಟಿಸ್‌ ಕಳುಹಿಸಿದ್ದಾರೆ. ಆದರೆ ಬ್ಯಾಂಕ್‌ ನೋಟಿಸ್‌ ಕಳುಹಿಸಿದ ಸ್ಥಳದಲ್ಲಿ ಸಾಲ ಪಡೆದವರ ಹೆಸರಿನ ವ್ಯಕಿಗಳೇ ವಾಸವಾಗಿಲ್ಲ ಎಂದ ಅಂಶ ಬೆಳಕಿಗೆ ಬಂದಿದೆ.

ಇದರಿಂದ ಆತಂಕಕ್ಕೀಡಾದ ವಿಡಿಸಿಸಿ ಬ್ಯಾಂಕ್‌ ಅಧಿ ಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ತಮ್ಮ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ವಂಚಿಸಿರುವುದು ಸ್ಪಷ್ಟವಾಗಿದೆ. ಇದರಿಂದ ಎಚ್ಚೆತ್ತ ಅಧಿ ಕಾರಿಗಳು ಕೂಡಲೇ ವಿ.ಜಿ.ಕೇಂ. ಸ. ಬ್ಯಾಂಕ್‌ ಅಧ್ಯಕ್ಷರು ಹಾಗೂ ಮೇಲಧಿ ಕಾರಿಗಳ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ಬಳಿಕ ಮೇಲ್ನೋಟಕ್ಕೆ ಇದು ವಂಚನೆ ಪ್ರಕರಣ ಎಂದು ಸಾಬೀತಾಗುತ್ತಲೇ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Advertisement

ಮತ್ತೂಂದೆಡೆ ಮೇ 1ರಂದು ಈ ಕುರಿತು ಗಾಂಧಿಚೌಕ್‌ ಠಾಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದರಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಅಧಿಕಾರಿಗಳನ್ನು ನೇಮಿಸಿದ್ದಾಗಿ ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಡಿಸಿಸಿ ಅಧ್ಯಕ್ಷರಾದ ಶಾಸಕ ಶಿವಾನಂದ ಪಾಟೀಲ, ವಂಚನೆ ಪ್ರಕರಣ ಬೆಳಕಿಗೆ ಬರುತ್ತಲೇ ಬ್ಯಾಂಕ್‌ನ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ದೂರು ದಾಖಲಿಸಿದ್ದು, ಬ್ಯಾಂಕ್‌ ಅಧಿ ಕಾರಿ-ಸಿಬ್ಬಂದಿಗಳ ಶಾಮೀಲು ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next