ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ಬಂಧಿಯಾಗಿರುವ ನಾಗರಾಜ್, ನೋಟು ಬದಲಾವಣೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿಧಿದ್ದಾನೆ ಎಂದು ಆರೋಪಿಸಿ ಉಲ್ಲಾಳದ ಮುನಿರಾಜು, ವಿಜಯನಗರದ ಕಲ್ಯಾಣ ಮತ್ತು ನಾಗರಬಾವಿ ನಿವಾಸಿ ಚಂದ್ರಕುಮಾರ್ ಎಂಬ ಮೂವರು ರಿಯಲ್ ಎಸ್ಟೇಟ್ ಉದ್ಯಮಿಗಳು ಕೆಂಗೇರಿ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.
2016ರ ಡಿಸೆಂಬರ್‌ನಲ್ಲಿ ಆರೋಪಿ ನಾಗರಾಜ್ ಅಪಮೌಲ್ಯಗೊಂಡ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆ ನಡೆಸುತ್ತಿದ್ದ. ಆರೋಪಿಯ ಬೆಂಬಲಿಗರಿಂದ ಈ ಮಾಹಿತಿ ಪಡೆದ ಉದ್ಯಮಿಗಳು ನಾಗರಾಜ್‌ನನ್ನು ಸಂಪರ್ಕಿಸಿ ನೋಟು ಬದಲಾವಣೆಗೆ ಶೇ.20ರಷ್ಟು ಕಮಿಷನ್ ಆಧಾರದ ಮೇಲೆ ಮಾತುಕತೆ ನಡೆಸಿದ್ದರು.
ಬಳಿಕ ಆರೋಪಿಯ ಬೆಂಬಲಿಗರ ಮಾತು ನಂಬಿದ ಮೂವರು ಉದ್ಯಮಿಗಳು ಒಟ್ಟು 8.05 ಕೋಟಿ ರೂಪಾಯಿ ಹಳೇ ನೋಟುಗಳನ್ನು ಸಂಗ್ರಹಿಸಿಕೊಂಡು ನಿಗದಿತ ಸ್ಥಳಗಳಿಗೆ ಹೋಗಿದ್ದರು. ಒಮ್ಮೆಲೇ ಕೋಟ್ಯಂತರ ರುಪಾಯಿ ಕಂಡ ನಾಗರಾಜ್ ಆರೋಪಿಗಳಿಗೆ ನೋಟುಗಳ ಬದಲಾವಣೆಗೆ ಗಡುವು ನೀಡಿದ್ದ. ಇದಕ್ಕೆ ಒಪ್ಪದ ಉದ್ಯಮಿಗಳಿಗೆ ಬೆಂಬಲಿಗರಿಂದ ಬೆದರಿಕೆ ಹಾಕಿ ಹಣ ದರೋಡೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಗರಬಾವಿಯ ಚಂದ್ರಕುಮಾರ್ ಅವರನ್ನು ವ್ಯವಹಾರದ ಸಂಬಂಧ ಪರಿಚಯಿಸಿಕೊಂಡಿದ್ದ ನಾಗರಾಜ್‌ನ ಅಳಿಯ ಬಯಪ್ಪ, ಶೇ.20 ರಷ್ಟು ಕಮಿಷನ್ ಆಧಾರದ ಮೇಲೆ ನೋಟುಗಳ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದ. ಅದರಂತೆ 2.5 ಕೋಟಿ ರೂ. ಹಣವನ್ನು 2016ರ ಡಿಸೆಂಬರ್ 10 ರಂದು ಕೆಂಗೇರಿ ಬಳಿಯ ರೈಲ್ವೆ ಪ್ಯಾರಲಲ್ ರಸ್ತೆಗೆ ತರಿಸಿಕೊಂಡು, ನಂತರ ಹಲ್ಲೆ ನಡೆಸಿ ಹಣ ಕಸಿದುಕೊಂಡಿದ್ದರು.
ಅದೇ ರೀತಿಯಲ್ಲಿ ಉಲ್ಲಾಳ ನಿವಾಸಿ ಮುನಿರಾಜು 1.75 ಕೋಟಿ ರೂ. ಹಳೇ ನೊಟುಗಳನ್ನು 2016ರ ಡಿಸೆಂಬರ್ 25 ರಂದು ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡಿದ್ದರು. ಇನ್ನು ವಿಜಯನಗರ ನಿವಾಸಿ ಕಲ್ಯಾಣ್, ನಾಗರಾಜನ ಆಪ್ತ ಶರವಣ ಹೇಳಿದಂತೆ 3.80 ಕೋಟಿ ರೂ ಹಳೇ ನೋಟುಗಳನ್ನು ಡಿಸೆಂಬರ್ 28 ರಂದು ಕೆಂಗೇರಿ ಉಪನಗರ ಬಳಿಯ ಅಡಿಗಾಸ್ ಹೊಟೆಲ್ ಹಿಂಭಾಗ ಹೋಗಿ ಹಣದೊಂದಿಗೆ ಕಾಯುತ್ತಿದ್ದರು. ಆಗ ನಾಗರಾಜ, ತನ್ನ ಮಕ್ಕಳು ಮತ್ತು ಸಹಚರರ ಜತೆ ಹೋಗಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಎಂದು ದೂರು ನೀಡಿದ್ದಾರೆ.
ನಾಗರಾಜ್ ಮತ್ತೆ ವಶಕ್ಕೆ
ಹೆಣ್ಣೂರು ಪೊಲೀಸರ ವಶದಲ್ಲಿರುವ ನಾಗರಾಜನ್‌ನ್ನು ಮೂರು ದರೋಡೆ ಪ್ರಕರಣಗಳ ಸಂಬಂಧ ವಶಕ್ಕೆ ಪಡೆಯಲು ಕೆಂಗೇರಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೋಮವಾರ ಆರೋಪಿಯ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಬಾಡಿ ವಾರೆಂಟ್ ಮೇಲೆ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವುದು ಎಂದು ಕೆಂಗೇರಿ ಪೊಲೀಸರು ತಿಳಿಸಿದರು.
ಪತ್ನಿಯರ ವಿಚಾರಣೆ
ನಾಗರಾಜ್ ಬಂಧನದ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಇಬ್ಬರು ಪತ್ನಿಯರಾದ ಪುಷ್ಪ ಮತ್ತು ಮಾಜಿ ಕಾರ್ಪೊರೇಟರ್ ಲಕ್ಷಿ$¾à ಅವರನ್ನು ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ವಶಕ್ಕೆ ಪಡೆದು, ಹೆಣ್ಣೂರು ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಪ್ರಕರಣ ಸಂಬಂಧ ಇಬ್ಬರು ಪತ್ನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡು, ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ತನಿಖಾಧಿಕಾರಿ ಶ್ರೀನಿವಾಸ್ “ಉದಯವಾಣಿ’ಗೆ ತಿಳಿಸಿದ್ದಾರೆ.