Advertisement

ಕಾಶ್ಮೀರ: ರಾಮಮಂದಿರದ ಬಳಿ ಉಗ್ರರ ದಾಳಿ: ಮೂವರು ನಾಗರಿಕರ ಸಾವು, 6 ಮಂದಿಗೆ ಗಾಯ

12:13 AM Jan 02, 2023 | Team Udayavani |

ರಜೌರಿ/ಹೊಸದಿಲ್ಲಿ: ಹೊಸ ವರ್ಷದ ದಿನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದೆ. ರವಿವಾರ ರಜೌರಿ ಜಿಲ್ಲೆಯ ಢಾಂಗ್ರಿ ಗ್ರಾಮದಲ್ಲಿರುವ ರಾಮಮಂದಿರದ ಸಮೀಪದಲ್ಲೇ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

Advertisement

ಕಾರೊಂದರಲ್ಲಿ ಬಂದ ಸಶಸ್ತ್ರಧಾರಿ ಉಗ್ರರು, ಒಂದೇ ಸಮನೆ ಗುಂಡಿನ ಮಳೆಗರೆದಿದ್ದು, ಅನಂತರ ಅದೇ ಕಾರಿನಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಂದೂಕು ಕಸಿದ ಉಗ್ರ: ಇದಕ್ಕೂ ಮುನ್ನ ಪುಲ್ವಾಮಾ ಜಿಲ್ಲೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಸಿಆರ್‌ಪಿಎಫ್ ಯೋಧರೊಬ್ಬರ ಕೈಯಿಂದ ಶಂಕಿತ ಉಗ್ರನೊಬ್ಬ ಬಂದೂಕನ್ನು ಕಿತ್ತುಕೊಂಡ ಘಟನೆ ನಡೆದಿದೆ. ಮಧ್ಯಾಹ್ನ 12.40ರ ವೇಳೆಗೆ ಯೋಧನ ಕೈಯಲ್ಲಿದ್ದ ಎಕೆ-47 ಅಸಾಲ್ಟ್ ರೈಫ‌ಲ್‌ ಕಸಿದುಕೊಂಡು ಉಗ್ರ ಪರಾರಿಯಾಗಿದ್ದಾನೆ. ಕೂಡಲೇ ಸುತ್ತಮುತ್ತಲೂ ಶೋಧ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಪಡೆ, ಆ ಉಗ್ರನ ಕುಟುಂಬ ಸದಸ್ಯರ ಸಹಾಯದೊಂದಿಗೆ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಅಣುಸ್ಥಾವರಗಳ ಮಾಹಿತಿ ವಿನಿಮಯ
32 ವರ್ಷಗಳಿಂದಲೂ ನಡೆದುಬಂದಿರುವ ಪದ್ಧತಿ ಯನ್ನು ಮುಂದುವರಿಸಿರುವ ಭಾರತ ಮತ್ತು ಪಾಕಿಸ್ಥಾನ ವರ್ಷದ ಮೊದಲ ದಿನವಾದ ರವಿವಾರ ಎರಡೂ ದೇಶಗಳಲ್ಲಿರುವ ಅಣು ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಉಭಯ ದೇಶಗಳು ಪರಸ್ಪರರ ಅಣುಸ್ಥಾವರಗಳ ಮೇಲೆ ದಾಳಿ ನಡೆಸುವುದನ್ನು ನಿರ್ಬಂಧಿಸಿ 32 ವರ್ಷಗಳ ಹಿಂದೆಯೇ ಭಾರತ-ಪಾಕ್‌ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದೇ ವೇಳೆ ಪಾಕ್‌ನ ಜೈಲಲ್ಲಿ ಶಿಕ್ಷೆ ಅವಧಿ ಪೂರ್ಣಗೊಳಿಸಿರುವ 631 ಮಂದಿ ಭಾರತೀಯ ಬೆಸ್ತರು ಮತ್ತು ಇಬ್ಬರು ನಾಗರಿಕರನ್ನು ಬಿಡುಗಡೆ ಮಾಡುವಂತೆ ಪಾಕಿಸ್ಥಾನಕ್ಕೆ ಭಾರತ ಕೋರಿಕೆ ಸಲ್ಲಿಸಿದೆ. ಇನ್ನೊಂದೆಡೆ ಪಾಕಿಸ್ಥಾನ ಕೂಡ ಭಾರತದಲ್ಲಿರುವ ತಮ್ಮ ದೇಶದ ಕೈದಿಗಳಿಗೆ ಕಾನ್ಸುಲರ್‌ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next