ರಾಂಚಿ: ಆನೆ ದಾಳಿಯ ಭಯದಿಂದ ಜತೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತದಿಂದ ಮೃತಪಟ್ಟಿರುವ ದಾರುಣ ಘಟನೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ಶುಕ್ರವಾರ(ಸೆ.6ರಂದು) ಪೊಲೀಸರು ತಿಳಿಸಿದ್ದಾರೆ.
ಚಿನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಚಪ್ಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ(ಸೆ.5) ರಾತ್ರಿ ಆನೆ ದಾಳಿಗೆ ಹೆದರಿ ಒಂದೇ ಕುಟುಂಬದ ಸುಮಾರು 8 ರಿಂದ 10 ಮಕ್ಕಳು ತಮ್ಮ ಹೆಂಚಿನ ಮನೆಯ ನೆಲದ ಮೇಲೆ ಮಲಗಿದ್ದರು. ಈ ವೇಳೆ ಮನೆಯೊಳಗೆ ವಿಷಕಾರಿ ಕಾಳಿಂಗ ಸರ್ಪವೊಂದು ಬಂದು ಮೂವರು ಮಕ್ಕಳಿಗೆ ಕಚ್ಚಿದೆ. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಮನೆಯವರು ಮಾಂತ್ರಿಕನ ಮನೆಯೊಂದಕ್ಕೆ ರಾತ್ರಿ 1 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನು ಮೂರನೇ ಮಗುವನ್ನು ನಕಲಿ ವೈದ್ಯನ ಬಳಿಕ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಆ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Video: ರೀಲ್ಸ್‌ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು
ಪನ್ನೇಲಾಲ್ ಕೊರವ (15), ಕಾಂಚನ್ ಕುಮಾರಿ (8) ಮತ್ತು ಬೇಬಿ ಕುಮಾರಿ (9) ಮೃತ ಮಕ್ಕಳು .
ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಆನೆಗಳ ಕಾಟ ವಿಪರೀತವಾಗಿದ್ದು ಇದರಿಂದಾಗಿ ಅಕ್ಕಪಕ್ಕದವರು ಸುರಕ್ಷಿತ ಸ್ಥಳದಲ್ಲಿ ನಿದ್ರೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಕೆಲವರು ಶಾಲಾ ಕಟ್ಟಡಗಳಲ್ಲಿ ಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಗುಂಪುಗಳಾಗಿ ಮಲಗುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.