ನವದೆಹಲಿ: ಭಾರತದಲ್ಲಿ ಸತತವಾಗಿ ನಾಲ್ಕು ಲಕ್ಷ ದಾಟಿದ್ದ ಕೋವಿಡ್ ಪ್ರಕರಣ ಇದೀಗ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ 3.26 ಲಕ್ಷ ನೂತನ ಕೋವಿಡ್ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2.43ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ಮೇ 15) ಬಿಡುಗಡೆಗೊಳಿಸಿದ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ,ರಾಜ್ಯ ಸರಕಾರಗಳು ವಿಫಲ:ಮಾಜಿ ಸಚಿವ ಸೊರಕೆ
ಕಳೆದ 24ಗಂಟೆಯಲ್ಲಿ 3,26,098 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 3,890 ಸಾವು ಸಂಭವಿಸಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡುತ್ತಿದ್ದು, ಒಟ್ಟು ಕೋವಿಡ್ ಪ್ರಕರಣ 2,43,72,907ಕ್ಕೆ ಹೆಚ್ಚಳವಾಗಿದೆ. ಈವರೆಗೆ 2,04,32,898 ಮಂದಿ ಗುಣಮುಖರಾಗಿದ್ದಾರೆ.
ಮಾರಣಾಂತಿಕ ಕೋವಿಡ್ ಎರಡನೇ ಅಲೆಗೆ ಒಟ್ಟು 2,66,207 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಈಗ 36,73,802 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಶುಕ್ರವಾರದವರೆಗೆ ದೇಶದಲ್ಲಿ 18 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಮಹಾರಾಷ್ಟ್ರದಲ್ಲಿ ಮಾರ್ಚ್ 31ರ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ 40,000 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 53.09 ಲಕ್ಷಕ್ಕೆ ಏರಿಕೆಯಾಗಿದ್ದು, ಸುಮಾರು 80 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.