Advertisement

ಹಾಸನಾಂಬೆಗೆ ಈ ವರ್ಷ 3.06 ಕೋಟಿ ರೂ ಆದಾಯ

09:11 PM Oct 30, 2019 | Lakshmi GovindaRaju |

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ 11 ದಿನಗಳಲ್ಲಿ ದೇವಾಲಯಕ್ಕೆ ಒಟ್ಟು 3.06 ಕೋಟಿ ರೂ. ಆದಾಯ ಸಂಗ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 58.12 ಲಕ್ಷ ರೂ. ಆದಾಯ ಹೆಚ್ಚಾಗಿದೆ. ವಿಶೇಷ ದರ್ಶನದ ಟಿಕೆಟ್‌ಗಳ ಮಾರಾಟದಿಂದ 1.75 ಕೋಟಿ ರೂ.. ಸಂಗ್ರಹವಾಗಿದ್ದರೆ, ಹುಂಡಿ ಕಾಣಿಕೆಯಿಂದ 1.31 ಕೋಟಿ ರೂ. ಸಂಗ್ರಹವಾಗಿದೆ.

Advertisement

ಹಾಸನಾಂಬ ದೇವಿ ದರ್ಶನದ 300 ರೂ. ಟಿಕೆಟ್‌ಗಳ ಮಾರಾಟದಿಂದ 72.28ಲಕ್ಷ ರೂ. ಹಾಗೂ 1000 ರೂ. ಟಿಕೆಟ್‌ ಮಾರಾಟದಿಂದ 76.16 ಲಕ್ಷ ರೂ. ಸಂಗ್ರಹವಾಗಿದ್ದರೆ, ಲಾಡು ಪ್ರಸಾದ ಮಾರಾಟದಿಂದ 25.46 ಲಕ್ಷ ರೂ. ಸಂಗ್ರಹವಾಗಿದೆ. ದೇಣಿಗೆ ರೂಪದಲ್ಲಿ 32 ಸಾವಿರ ರೂ. ದೇವರಿಗೆ ಭಕ್ತರು ಅರ್ಪಿಸಿದ ಸೀರೆಗಳ ಮಾರಾಟದಿಂದ 93ಸಾವಿರ ರೂ., ಹಾಸನಾಂಬ ದೇವಾಲಯದ ಹುಂಡಿಯಲ್ಲಿ 1.31 ಕೋಟಿ ರೂ., ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ 12.18 ಲಕ್ಷ ರೂ. ಸಂಗ್ರಹವಾಗಿದೆ. ಅಮೆರಿಕಾದ ಡಾಲರ್‌ಗಳೂ ಹುಂಡಿಗೆ ಬಿದ್ದಿದ್ದವು.

ಹಾಸನಾಂಬ ದೇಗುಲದ ಆವರಣದಲ್ಲಿರುವ ಸಿದ್ದೇಶ್ವರ ದೇವಾಲಯದ ಮುಂಭಾಗ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಹುಂಡಿಯ ಎಣಿಕೆ ಸಂಜೆ 5.30 ರ ವೇಳೆಗೆ ಮುಗಿಯಿತು. ಆನಂತರ ದೇವಸ್ಥಾನದ ಆಡಳಿತಾಧಿಕಾರಿ ಎಚ್‌.ಎಲ್‌. ನಾಗರಾಜ್‌ ಅವರು ದೇವಾಲಯದ ಆದಾಯದ ಬಗ್ಗೆ ಮಾಹಿತಿ ನೀಡಿದರು.

13 ದಿನ ಬಾಗಿಲು ತೆರೆದಿದ್ದ ದೇವಾಲಯ: ಈ ವರ್ಷ ಹಾಸನಾಂಬ ದೇವಾಲಯದ ಬಾಗಿಲು ಒಟ್ಟು 13 ದಿನ ತೆರೆದಿತ್ತು. ಬಾಗಿಲು ತೆರೆದ ದಿನ ಹಾಗೂ ಬಾಗಿಲು ಮುಚ್ಚುವ ದಿನ ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ. ಆ ಎರಡು ದಿನಗಳಲ್ಲಿ ಅಧಿಕಾರಿಗಳು, ಗಣ್ಯರು, ಪ್ರಭಾವಿಗಳು ಮಾತ್ರ ದೇವರ ದರ್ಶನ ಪಡೆಯುತ್ತಾರೆ. ಹಾಗಾಗಿ ಈ ವರ್ಷ ಅಧಿಕೃತವಾಗಿ ಭಕ್ತರಿಗೆ ದೇವಿಯ ದರ್ಶನ ಸಿಕ್ಕಿದ್ದು 11 ದಿನಗಳು ಮಾತ್ರ. ಈ 11 ದಿನಗಳಲ್ಲಿ 3.06 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷ ಹಾಸನಾಂಬೆ ದೇಗುಲಕ್ಕೆ (2018) 2.48 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ ಹಾನಾಂಬೆಯ ದರ್ಶನ ಕೇವಲ 7 ದಿನ ಮಾತ್ರ ನಿಗದಿಯಾಗಿತ್ತು.

ಹಾಸನಾಂಬೆ ಆದಾಯ
ಯಾವ ವರ್ಷ ಎಷ್ಟೆಷ್ಟು ?
2019 ರಲ್ಲಿ 3.06 ಕೋಟಿ ರೂ.
2018 ರಲ್ಲಿ 2.48 ಕೋಟಿ ರೂ.
2017 ರಲ್ಲಿ 4.14 ಕೋಟಿ ರೂ.
2016 ರಲ್ಲಿ 2.65 ಕೋಟಿ ರೂ.
2015 ರಲ್ಲಿ 1.46 ಕೋಟಿ ರೂ.

Advertisement

ಹಾಸನಾಂಬೆಗೆ ಭಕ್ತರಿಂದ ವಿಚಿತ್ರ ಬೇಡಿಕೆಗಳು!
ಹಾಸನ: ಹಾಸನಾಂಬೆಯ ದರ್ಶನದ ವೇಳೆ ಈ ವರ್ಷ 3.06 ಕೋಟಿ ರೂ ಆದಾಯ ಹರಿದು ಬಂದಿದೆ. ಆದರೆ ಭಕ್ತರು ಹಾಸನಾಂಬೆಯ ಸನ್ನಿಧಿಯಲ್ಲಿ ಚಿತ್ರ- ವಿಚಿತ್ರ ಬೇಡಿಕೆಗಳನ್ನೂ ಮಂಡಿಸಿದ್ದಾರೆ. ಹಾಸನಾಂಬೆಯ ದೇಗುಲದ ಹುಂಡಿಗಳನ್ನು ಬುಧವಾರ ತೆರೆದಾಗ ಭಕ್ತರು ದೇವಿಗೆ ಅರ್ಪಿಸಿದ ನಗದು ಕಾಣಿಕೆ, ಚಿನ್ನ, ಬೆಳ್ಳಿಯ ಜೊತೆಗೆ ಲಿಖೀತ ಬೇಡಿಕೆಗಳೂ ಅನಾವರಣಗೊಂಡವು. ತಾಯೇ ನಮ್ಮ ಸಾಲಗಳನ್ನೆಲ್ಲಾ ತೀರಿಸಿ, ಒಂದು ನಿವೇಶನ ತೆಗೆದುಕೊಳ್ಳಲು ದಯೆ ತೋರಮ್ಮ ಎಂದು ಒಂದು ಪತ್ರದಲ್ಲಿ ಬರೆದಿದ್ದರೆ, ನನ್ನ ಮಕ್ಕಳಿಗೆ ಒಳ್ಳೆ ವಿದ್ಯೆ, ಬುದ್ದಿ ಮತ್ತು ಗಂಡನಿಗೆ ಹಾಗೂ ಕುಟುಂಬದವರಿಗೆ ಆಯಸ್ಸು ಕೊಡು ತಾಯಿ ಎಂದು ಬೇಡಿಕೆಗಳ ಪತ್ರಗಳೂ ಇದ್ದು.

ನಾನು ದ್ವಿತೀಯ ಪಿಯುಸಿಯಲ್ಲಿ ಪಾಸ್‌ ಹಾಗುವ ರೀತಿ ಮಾಡು ತಾಯಿ, ಓದುವ ಆಸಕ್ತಿ ಕರುಣಿಸು, ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುವಂತೆ ಮಾಡು ತಾಯಿ ಎಂದು ಒಂದು ಪತ್ರದಲ್ಲಿದ್ದರೆ, , ನನ್ನ ತಾಯಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಸಿಗುವಂತೆ ಮಾಡು ಎಂದು ಮತ್ತೊಂದು ಬೇಡಿಕೆ, ಪ್ರೀತಿ ಮಾಡುತ್ತಿರುವ ಹುಡುಗಿ ಮನೆಯವರು ಮತ್ತು ನಮ್ಮ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದರೇ ನಾನು ಪ್ರತಿ ವರ್ಷ ನಿನ್ನ ದರ್ಶನಕ್ಕೆ ಬರುತ್ತೀನಿ ಎಂದಿದ್ದರೆ ಮತ್ತೊಂದರಲ್ಲಿ ಹಾಸನ ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಹಾಸನದಲ್ಲೆ ಇರಬೇಕು ಎಂದು ಪತ್ರವೊಂದು ಹುಂಡಿಯಲ್ಲಿತ್ತು.

ನನ್ನ ಮಗಳ ಮದುವೆ ಮಾಡಿ 6 ತಿಂಗಳಾಯ್ತು, ನನ್ನ ಸೈಟು ಮಾರಿ 20 ಲಕ್ಷ ಖರ್ಚು ಮಾಡಿ ಮದುವೆ ಮಾಡಿದೆ, ಈಗ ಗಂಡನ ಮನೆಯಲ್ಲಿ ಹಿಂಸೆ ಕೊಡುತ್ತಿದ್ದಾರೆ. ಅತ್ತೆ ಮತ್ತು ಅವರ 3 ಜನ ಹೆಣ್ಣು ಮಕ್ಕಳು, ಅತ್ತೆ ಮನೆಯ ಕೆಲಸದವನು ಎಲ್ಲಾ ಸೇರಿ ಮಗಳಿಗೆ ಊಟ ಕೊಡುತ್ತಿಲ್ಲ. ಅವಳಿಗೆ ನೆಮ್ಮದಿ ಕೊಡು ತಾಯಿ, ಬೀಗರ ಮನೆಗೆ ಹೋದರೇ ನಾಯಿಗಿಂತ ಕಡೆಯಾಗಿ ನಮ್ಮ ಕಾಣುತ್ತಿದ್ದಾರೆ. ಸರಿಮಾಡು ತಾಯಿ ಎಂದು ಒಬ್ಬರು ಬೇಡಿಕೊಂಡಿದ್ದರೆ, ನನಗೆ ಬೇಗ ಸೈಟು ಸಿಕ್ಕಿ ಮನೆ ಕಟ್ಟಬೇಕು. ನನ್ನ ಗಂಡನಿಗೆ ಒಳ್ಳೆ ಬುದ್ದಿ ಕೊಡವ್ವ, ನನ್ನ ಗಂಡ ನಾನು ಹೇಳಿದ ಹಾಗೇ ಕೇಳಬೇಕು ಎಂದು ಕೋರಿದ್ದರು.

ನಿನ್ನ ಆಶೀರ್ವಾದ ಸದಾ ಇರಲಿ: ನಾನು ಮದುವೆಯಾಗಿ 10 ವರ್ಷಗಳು ಕಳೆದಿದೆ, ನಮಗೆ ಸಂತಾನ ಫ‌ಲ ನೀಡಮ್ಮ, ನನ್ನ ಕಷ್ಟಗಳನ್ನು ದೂರ ಮಾಡಿ ಇನ್ನು ಒಂದು ವರ್ಷದೊಳಗೆ ಯಾವುದಾದರೂ ಒಂದು ಮಗುವನ್ನು ನಮಗೆ ನೀಡಮ್ಮ ಪ್ರತಿ ವರ್ಷ ನಿನ್ನ ಸನ್ನಿದಿಗೆ ಬಂದು ಹರಕೆ ತೀರಿಸುತ್ತೇನೆ ಎಂಬ ಪತ್ರವೂ ಹುಂಡಿಯಲ್ಲಿತ್ತು. ಕೆಲವು ಅಧಿಕಾರಿಗಳು ಹಾಸನಿಂದ ವರ್ಗವಾಗಲಿ ಎಂಬ ಬೇಡಿಕೆಯ ಪತ್ರಗಳೂ ಇದ್ದವು. ಹೀಗೆ ಹತ್ತು, ಹಲವು ವಿಚಿತ್ರ ಬೇಡಿಕೆಗಳ ಪತ್ರಗಳು ಹುಂಡಿ ಎಣಿಕೆ ವೇಳೆಯಲ್ಲಿ ಸಿಕ್ಕಿದವು.

ಬಿಜೆಪಿಯವರಿಂದ ಹಾಸನಾಂಬೆ ಜಾತ್ರೆ ದುರ್ಬಳಕೆ: ಆರೋಪ
ಹಾಸನ: ಹಾಸನಾಂಬೆಯ ದರ್ಶನ ಈ ಬಾರಿ ಬಿಜೆಪಿ ಕಾರ್ಯಕರ್ತರಿಗೆ ಮೀಸಲಾದಂತಿತ್ತು. ಜಾತ್ರಾ ಮಹೋತ್ಸವವನ್ನು ಬಿಜೆಪಿ ಕಾರ್ಯಕರ್ತರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಅವರು ದೂರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರೀತಂ ಜೆ.ಗೌಡ ಅವರ ಮೂರ್‍ನಾಲ್ಕು ಮಂದಿ ಹಿಂಬಾಲಕರು ದೇವಾಲಯದ ಮುಂಭಾಗ ಪ್ರತಿದಿನ ಮುಂಜಾನೆಯಿಂದ ರಾತ್ರಿವರೆಗೂ ನಿಂತುಕೊಂಡು ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಬಿಜೆಪಿ ಕಾರ್ಯಕರ್ತರನ್ನು ನೇರವಾಗಿ ಹಾಸನಾಂಬೆಯ ದರ್ಶನಕ್ಕೆ ಕಳುಹಿಸುತ್ತಿದ್ದರು. ವಿಶೇಷ ದರ್ಶನ ಪಾಸುಗಳನು ಬಿಜೆಪಿ ಕಾರ್ಯಕರ್ತರ ಮನೆ ಮನೆಗಳಿಗೂ ಹಂಚಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ಮುಖಂಡರಿಗೆ ಹತ್ತಾರು ಪಾಸು ನೀಡಿದರೆ, ಬಿಜೆಪಿ ಶಾಸಕರು, ಮುಖಂಡರಿಗೆ ನೂರಾರು ಪಾಸುಗಳನ್ನು ನೀಡಲಾಗಿದೆ. ದೇವಿಯ ವಿಶೇಷ ದರ್ಶನದ ಪಾಸುಗಳನ್ನು ಯಾರ್ಯಾರಿಗೆಗೆ ಎಷ್ಟೆಷ್ಟು ವಿತರಣೆ ಮಾಡಲಾಗಿದೆ, ಯಾವ ಮಾನದಂಡ ಆಧರಿಸಿ ಪಾಸ್‌ ನೀಡಲಾಗಿದೆ ಎಂಬ ಬಗ್ಗೆ ಜಿಲ್ಲಾಡಳಿತವು ಉತ್ತರ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದ ಸ್ವರೂಪ್‌ ಅವರು, ದೇವಾಲಯದ ಬಾಗಿಲು ತೆರೆದ ದಿನದಿಂದಲೂ ಬಿಜೆಪಿ ಕಾರ್ಯಕರ್ತರು ಮಹೋತ್ಸವವನ್ನು ದುರ್ಬಳಕೆ ಮಾಡಿಕೊಂಡರು.

ಜಾತ್ರೆ ನಡೆಯುವ ವೇಳೆ ಮಾತನಾಡಿ ಜಾತ್ರೆ ಮಹೋತ್ಸವದ ಮೇಲೆ ದುಷ್ಪರಿಣಾಮ ಬೀರದಿರಲಿ ಎಂದು ನಾನೂ ಸೇರಿದಂತೆ ಜೆಡಿಎಸ್‌ ಮುಂಡರು ಸುಮ್ಮನಿದ್ದರು ಎಂದು ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆಯಲ್ಲಿ 7 ಜನ ಶಾಸಕರಿದ್ದಾರೆ. ಪ್ರೀತಂ ಜೆ.ಗೌಡ ಒಬ್ಬರೇ ಶಾಸಕರಲ್ಲ. ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಹಾಗೂ ಸಮಾರೋಪ ಸಮಾರಂಭಕ್ಕೆ ಜೆಡಿಎಸ್‌ ಶಾಸಕರನು ಜಿಲ್ಲಾಡಳಿತವು ಆಹ್ವಾನಿಸಿಲ್ಲ ಎಂದೂ ದೂರಿದರು. ನಗರಸಭೆ ಸದಸ್ಯರಾದ ಪ್ರಶಾಂತ್‌ ನಾಗರಾಜು, ವಾಸುದೇವ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ್‌, ರಂಗಸ್ವಾಮಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next