Advertisement

Bengaluru: ಬೆಂಗಳೂರಿನಲ್ಲಿ ವಿಪಕ್ಷಗಳ 2ನೇ ಏಕತಾ ಸಭೆ

11:11 PM Jul 12, 2023 | Team Udayavani |

ನವದೆಹಲಿ: ಮುಂಬರಲಿರುವ 2024ರ ಲೋಕಸಭೆ ಚುನಾ­ವಣೆ­ಯಲ್ಲಿ ಬಿಜೆಪಿಯನ್ನು ಹಣಿಯಲು ಸಜ್ಜುಗೊಂಡಿರುವ ಕಾಂಗ್ರೆಸ್‌, ವಿಪಕ್ಷಗಳ ಒಕ್ಕೂಟದ ವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ. ಇದರ ಭಾಗವಾಗಿ ಜುಲೈ 17-18ರಂದು ಬೆಂಗಳೂ­ರಿನಲ್ಲಿ ವಿಪಕ್ಷಗಳ 2ನೇ ಏಕತಾ ಸಭೆಯನ್ನು ಆಯೋಜಿಸಿದೆ. ಬಿಜೆಪಿಯೇತರ 24 ಪಕ್ಷಗಳ ಮುಖ್ಯಸ್ಥರಿಗೆ ಸಭೆಗೆ ಆಹ್ವಾನ ನೀಡಲಾಗಿದ್ದು, ಎಲ್ಲಾ ನಾಯಕರು ಪಾಲ್ಗೊಳ್ಳ­ಲಿದ್ದಾರೆ.

Advertisement

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್‌ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಜು.17ರಂದು ಸೋನಿಯಾ ಅವರ ನೇತೃತ್ವದಲ್ಲಿ ವಿಪಕ್ಷಗಳ ನಾಯಕರ ಔತಣಕೂಟ ನಡೆಯಲಿದ್ದು, ಜು.18ರಂದು ಚುನಾವಣೆ ಕಾರ್ಯತಂತ್ರದ ಕುರಿತು ಸಭೆ ನಡೆಯಲಿದೆ. ಕಾಂಗ್ರೆಸ್‌ ಹೊಸತಾಗಿ ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್‌ಎಸ್‌ಪಿ, ಐಯುಎಂಎಲ್‌, ಆಲ್‌ ಇಂಡಿಯಾ ಫಾರ್ವರ್ಡ್‌ ಬ್ಲಾಕ್‌, ಕೇರಳ ಕಾಂಗ್ರೆಸ್‌(ಜೋಸೆಫ್), ಕೇರಳ ಕಾಂಗ್ರೆಸ್‌ (ಮಣಿ) ಪಕ್ಷಗಳಿಗೂ ಆಹ್ವಾನ ನೀಡಿದೆ. 24 ವಿಪಕ್ಷಗಳು ಪ್ರಸ್ತುತ 150 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸುವ ಪ್ರಸ್ತಾಪಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಮೊದಲ ಏಕತಾ ಸಭೆಯನ್ನು ಪಾಟ್ನಾದಲ್ಲಿ ಜೂನ್‌23ರಂದು ನಡೆಸಲಾಗಿತ್ತು.

ಆಮ್‌ ಆದ್ಮಿ ಪಕ್ಷಕ್ಕೂ ಆಹ್ವಾನ
ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಆಮ್‌ ಆದ್ಮಿ ಪಕ್ಷಕ್ಕೂ ಆಹ್ವಾನ ನೀಡಲಾಗಿದೆ. ಆದರೆ, ಮೊದಲ ಸಭೆಯಲ್ಲೇ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರು ದೆಹಲಿ ಸುಗ್ರೀವಾಜ್ಞೆ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಬಹಿರಂಗ ಪಡಿಸುವಂತೆ ಕೇಳಿದ್ದರು. ಆ ಬಳಿಕವಷ್ಟೇ ವಿಪಕ್ಷಗಳ ಒಕ್ಕೂಟಕ್ಕೆ ಬೆಂಬಲ ಸೂಚಿಸುವ ನಿರ್ಣಯದ ಬಗ್ಗೆ ತಿಳಿಸುವುದಾಗಿಯೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ 2ನೇ ಸಭೆಯಲ್ಲಿ ಕಾಂಗ್ರೆಸ್‌ ದೆಹಲಿ ಸುಗ್ರೀವಾಜ್ಞೆ ವಿಚಾರವನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಹುಲ್‌ ಅನರ್ಹತೆ: ಸುಪ್ರೀಂಗೆ ಪೂರ್ಣೇಶ್‌
ಮೋದಿ ಕುಲನಾಮದ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ, ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್‌ ಅರ್ಜಿ ದಾಖ­ಲಿ­ಸಿದ್ದಾರೆ. ಮೋದಿ ಕುಲನಾಮದ ಬಗ್ಗೆ ಹಗುರವಾಗಿ ಮಾತನಾಡಿದ್ದ ಪ್ರಕರಣ­ದಲ್ಲಿ ರಾಹುಲ್‌ಗೆ ಸೂರತ್‌ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಇದಕ್ಕೆ ತಡೆ ನೀಡಲು ಅಹ್ಮದಾ ಬಾದ್‌ ಹೈಕೋರ್ಟ್‌ ಇತ್ತೀಚೆಗಷ್ಟೇ ನಿರಾಕರಿಸಿತ್ತು. ಈ ಬೆನ್ನಲ್ಲೇ, ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್‌ ಸುಪ್ರೀಂ ಮೆಟ್ಟಿಲೇರುವುದಾಗಿ ಘೋಷಿಸಿತ್ತು. ಅದಕ್ಕೂ ಮುಂಚಿತವಾಗಿ ಪೂರ್ಣೇಶ್‌ ಸುಪ್ರೀಂನಲ್ಲಿ ಕೇವಿಯಟ್‌ ಅರ್ಜಿ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next