Advertisement

2nd PUC Annual Exam: ಖಾಸಗಿ ಅಭ್ಯರ್ಥಿಗಳು ಸರಕಾರಿ ಪಿಯು ಕಾಲೇಜಿನಲ್ಲಿ ನೋಂದಣಿ ಕಡ್ಡಾಯ

01:30 AM Nov 01, 2023 | Team Udayavani |

ಉಡುಪಿ: ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಸರಕಾರಿ ಪದವಿಪೂರ್ವ ಕಾಲೇಜಿನಲ್ಲೇ ನೋಂದಣಿ ಮಾಡಿಸಬೇಕು ಎಂಬ ನಿಯಮವನ್ನು ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದರಿಂದ ಕೆಲವುಅಭ್ಯರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.

Advertisement

ಎಸೆಸೆಲ್ಸಿಯ ಅನಂತರದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣ ರಾದ ಅಥವಾ ಪ್ರಥಮ ಪಿಯುಸಿ ಓದದೇ ಖಾಸಗಿ ಅಭ್ಯರ್ಥಿಯಾಗಿ ನೇರವಾಗಿ ದ್ವಿತೀಯ ಪಿಯುಸಿ ಬರೆಯುವ ಅಭ್ಯರ್ಥಿಗಳು ತಮ್ಮ ವಾಸ ಸ್ಥಾನಕ್ಕೆ ಹತ್ತಿರವಿರುವ ಅಥವಾ ಉದ್ಯೋಗ ಮಾಡುವ ಸ್ಥಳಕ್ಕೆ ಸಮೀಪದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾತ್ರ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಾಸ ಸ್ಥಳದ ಖಾತರಿಗಾಗಿ ಮತದಾರರ ಚೀಟಿ/ಪಡಿತರ ಚೀಟಿ/ ಬ್ಯಾಂಕ್‌ಪಾಸ್‌ಬುಕ್‌/ ಡ್ರೈವಿಂಗ್‌ ಲೈಸೆನ್ಸ್‌ ದೃಢೀಕೃತ ದಾಖಲೆಯನ್ನು ಸಲ್ಲಿಸಬೇಕು ಎಂದು ಸ್ಪಷ್ಟವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತುಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಉದ್ಯೋಗದ ಜತೆಗೆ ಶಿಕ್ಷಣ ಮುಂದುವರಿಸುತ್ತಿರುವ ಖಾಸಗಿ ಅಭ್ಯರ್ಥಿಗಳಿಗೆ ಇದರಿಂದ ಯಾವ ಸಮಸ್ಯೆಯೂ ಇಲ್ಲ. ತಾವು ಉದ್ಯೋಗ ಮಾಡುತ್ತಿರುವ ಸ್ಥಳದ ಸೂಕ್ತ ದಾಖಲೆ ನೀಡಿ, ಅಲ್ಲಿಗೆ ಸಮೀಪವಿರುವ ಸರಕಾರಿ ಕಾಲೇಜಿನಲ್ಲಿ ನೋಂದಣಿ ಮಾಡಿಸಬಹುದು. ಆದರೆ, ತಮ್ಮ ಊರಿನಿಂದ ಹೊರಗೆ ಖಾಸಗಿಯಾಗಿ ವಿದ್ಯಾಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಅನ್ಯ ಕಾರಣದಿಂದ ಊರು ಬಿಟ್ಟು ಬೇರೆಡೆಯಿದ್ದು ಶಿಕ್ಷಣ ಪಡೆಯುತ್ತಿರುವವರು ಈಗ ಊರಿಗೆ ಹೋಗಿ ಸಮೀಪದ ಸರಕಾರಿ ಕಾಲೇಜುಗಳಲ್ಲಿ ನೋಂದಾಯಿಸಿಕೊಳ್ಳಲೇ ಬೇಕಾಗಿದೆ. ಇದು ಹೊಸ ನಿಯಮವಲ್ಲ. ಆದರೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ.

ಈ ಹಿಂದಿನ ವರ್ಷಗಳಲ್ಲೂ ಖಾಸಗಿ ಅಭ್ಯರ್ಥಿಗಳು ಸರಕಾರಿ ಪಿಯು ಕಾಲೇಜಿನಲ್ಲಿ ನೋಂದಣಿ ಮಾಡಿಸಿಕೊಳ್ಳಲೇ ಬೇಕಿತ್ತು. ಆದರೆ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಜಾರಿಯಾದ ಅನಂತರದಲ್ಲಿ ವಿದ್ಯಾರ್ಥಿಗಳ ಮಾಹಿತಿ ದಾಖಲೀಕರಣವಾಗುವುದರಿಂದ ಪ್ರತಿ ಖಾಸಗಿ ಅಭ್ಯರ್ಥಿಗಳು ಸರಕಾರಿ ಪಿಯು ಕಾಲೇಜಿನ ಲಾಗಿನ್‌ ಅಲ್ಲಿಯೇ ನೋಂದಣಿ ಆಗಬೇಕು. ಸರಕಾರಿ ಕಾಲೇಜಿನ ಪ್ರಾಂಶುಪಾಲರು ಕೂಡ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ 20ರೂ.ಗಳ ಛಾಪಾ ಕಾಗದದಲ್ಲಿ ದೃಢೀಕರಣವನ್ನು ಪಡೆಯಲೇ ಬೇಕಾಗಿದೆ.
ಖಾಸಗಿ ಅಭ್ಯರ್ಥಿಗಳಾಗಿ ಸುಳ್ಳು ನೋಂದಣಿಯಾಗುವ ಸಾಧ್ಯತೆಯಿದೆ ಅಥವಾ ಬೇರೆಯವರು ಬಂದು ಪರೀಕ್ಷೆ ಬರೆಯಬಹುದಾದ ಅವಕಾಶವೂ ಇದೆ. ನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅವರ ಉಪನ್ಯಾಸಕರು, ಸಹಪಾಠಿಗಳ ಪರಿಚಯ ಇರುತ್ತದೆ. ಖಾಸಗಿ ಅಭ್ಯರ್ಥಿ ಯಾರು ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಹೀಗಾಗಿ ಪರೀಕ್ಷೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಅಥವಾ ಖಾಸಗಿ ಅಭ್ಯರ್ಥಿಗಳ ಹೆಸರಿನಲ್ಲಿ ಯಾವುದೇ ಆಕ್ರಮ ನಡೆಯದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ. 2007ರ ಮಾರ್ಚ್‌ 31 ಅಥವಾ ಅದಕ್ಕಿಂತ ಮೊದಲು ಜನಿಸಿದವರು(17 ವರ್ಷ ತುಂಬಿರುವ) ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯುಸಿ ಬರೆಯಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next