Advertisement

ಫ‌ಕಾರ್‌ ಜಮಾನ್‌: ಏಕದಿನ ಪಂದ್ಯದ ಚೇಸಿಂಗ್‌ ವೇಳೆ ಅತ್ಯಧಿಕ ರನ್‌

10:24 PM Apr 05, 2021 | Team Udayavani |

ಜೊಹಾನ್ಸ್‌ಬರ್ಗ್: ಪಾಕಿಸ್ಥಾನದ ಎಡಗೈ ಆರಂಭಕಾರ ಫ‌ಕಾರ್‌ ಜಮಾನ್‌ ಏಕದಿನ ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಬರೆದರು. ರವಿವಾರ ನಡೆದ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ 193 ರನ್‌ ಬಾರಿಸುವ ಮೂಲಕ ಅವರು ಶೇನ್‌ ವಾಟ್ಸನ್‌ ದಾಖಲೆ ಮುರಿದರು.

Advertisement

ಶೇನ್‌ ವಾಟ್ಸನ್‌ 2011ರಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 185 ರನ್‌ ಬಾರಿಸಿದ್ದು ಚೇಸಿಂಗ್‌ ವೇಳೆ ದಾಖಲಾದ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿತ್ತು. ಎಂ.ಎಸ್‌. ಧೋನಿ (ಅಜೇಯ 183), ಕೊಹ್ಲಿ (183) ಉಳಿದಿಬ್ಬರು ಸಾಧಕರು.

ಫ‌ಕಾರ್‌ ಜಮಾನ್‌ ಸಾಹಸದ ಹೊರತಾಗಿಯೂ ಪಾಕಿಸ್ಥಾನ ಈ ಪಂದ್ಯದಲ್ಲಿ ಸೋಲನುಭವಿಸಿತು. ಹೀಗಾಗಿ ಅವರು ಪರಾಜಿತ ತಂಡದ ಪರ ಎರಡನೇ ಅತ್ಯಧಿಕ ರನ್‌ ಹೊಡೆದವರ ಯಾದಿಯಲ್ಲಿ ಕಾಣಿಸಿಕೊಂಡರು. ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್‌ ಕೊವೆಂಟ್ರಿ 194 ರನ್‌ ಬಾರಿಸಿದ್ದು ದಾಖಲೆ.

ದ. ಆಫ್ರಿಕಾದಲ್ಲಿ ಅತ್ಯಧಿಕ ಗಳಿಕೆ
ಫ‌ಕಾರ್‌ ಜಮಾನ್‌ ಅವರ 193 ರನ್‌ ಸಾಧನೆ ದಕ್ಷಿಣ ಆಫ್ರಿಕಾ ನೆಲದಲ್ಲಿ ದಾಖಲಾದ ಕ್ರಿಕೆಟಿಗನೊಬ್ಬನ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. 2017ರಲ್ಲಿ ಲಂಕಾ ವಿರುದ್ಧ 185 ರನ್‌ ಬಾರಿಸಿದ ಫಾ ಡು ಪ್ಲೆಸಿಸ್‌ ದಾಖಲೆ ಪತನಗೊಂಡಿತು.

ಇದನ್ನೂ ಓದಿ :ರಮೇಶ್‌ ಜಾರಕಿಹೊಳಿಗೆ ಕೋವಿಡ್ ಬಂದಿರುವುದು ಅನುಮಾನ: ವಕೀಲ ಜಗದೀಶ್‌

Advertisement

ಡಿ ಕಾಕ್‌ ವರ್ತನೆಗೆ ಟೀಕೆ
ಈ ಪಂದ್ಯದ ವೇಳೆ ಫ‌ಕಾರ್‌ ಜಮಾನ್‌ ರನೌಟ್‌ ಆದ ರೀತಿ ವಿವಾದಕ್ಕೆ ಕಾರಣವಾಗಿದೆ. ದ.ಆಫ್ರಿಕಾ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ಉದ್ದೇಶಪೂರ್ವಕವಾಗಿ ಜಮಾನ್‌ ಗಮನವನ್ನು ವಿಚಲಿತಗೊಳಿಸಿ ರನೌಟ್‌ ಆಗಲು ಕಾರಣರಾದರು ಎನ್ನುವುದು ಆರೋಪ.
ಅಂತಿಮ ಓವರ್‌ನ ಮೊದಲ ಎಸೆತವನ್ನು ಫ‌ಕಾರ್‌ ಲಾಂಗ್‌ಆಫ್ಗೆ ಬಡಿದಟ್ಟಿ ಎರಡನೇ ರನ್‌ ಪೂರೈಸಲು ಓಡಿದರು. ಈ ವೇಳೆ ಡಿ ಕಾಕ್‌, ಚೆಂಡನ್ನು ಇನ್ನೊಂದು ತುದಿಯತ್ತ ಎಸೆಯಲಾಗುತ್ತಿದೆ ಎಂದು ಪದೇ ಪದೇ ಹೇಳುತ್ತ ಜಮಾನ್‌ ಅವರನ್ನು ವಿಚಲಿತಗೊಳಿಸಿದರು. ಇದರಿಂದ ಹಿಂದೆ ತಿರುಗಿ ನೋಡಿದ ಜಮಾನ್‌ ಓಟವನ್ನು ನಿಧಾನಗೊಳಿಸಿದರು. ಮಾರ್ಕ್‌ರಮ್‌ ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿತು. ಜಮಾನ್‌ ರನೌಟಾದರು!

45.1.1ರ ನಿಯಮದನ್ವಯ ಯಾವುದೇ ಕ್ಷೇತ್ರರಕ್ಷಕ, ಬ್ಯಾಟ್ಸ್‌ಮನ್‌ ಗಮನವನ್ನು ಉದ್ದೇಶಪೂರ್ವಕವಾಗಿ ಸೆಳೆದರೆ, ಅಡ್ಡಿ ಮಾಡಿದರೆ ಅದನ್ನು ತಪ್ಪೆಂದು ಪರಿಗಣಿಸಲಾಗುತ್ತದೆ. ಆಗ ಬ್ಯಾಟ್ಸ್‌ಮನ್‌ ನಾಟೌಟ್‌ ಆಗುತ್ತಾನೆ, ಹಾಗೆಯೇ ತಂಡಕ್ಕೆ 5 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next