ಕೇಪ್‌ಟೌನ್: ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕೂಟಕ್ಕೆ ದಕ್ಷಿಣ ಆಫ್ರಿಕಾ ತಂಡ (South Africa Team) ಪ್ರಕಟಿಸಲಾಗಿದೆ. ತೆಂಬ ಬವುಮಾ ನಾಯಕತ್ವದಲ್ಲಿ 15 ಮಂದಿ ಆಟಗಾರರ ತಂಡ ಪ್ರಕಟಿಸಲಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸುವುದರೊಂದಿಗೆ ಬಿ ಗುಂಪಿನಲ್ಲಿರುವ ಎಲ್ಲಾ ದೇಶಗಳು ತಂಡ ಹೆಸರಿಸಿದಂತಾಗಿದೆ. ಬಿ ಗುಂಪಿನಲ್ಲಿರುವ ಉಳಿದ ತಂಡಗಳೆಂದರೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ಥಾನ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳಿವೆ.
ಕಳೆದ ಟಿ20 ವಿಶ್ವಕಪ್ ನಲ್ಲಿ ಫೈನಲ್ ತಲುಪಿ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ಈ ಬಾರಿ ಟ್ರೋಫಿ ಎತ್ತುವ ಉಮೇದಿನಲ್ಲಿದೆ.
ಇತ್ತೀಚಿನ ಗಾಯಗಳಿಂದ ಚೇತರಿಸಿಕೊಂಡ ನಂತರ ಲುಂಗಿ ಎನ್‌ಗಿಡಿ ಮತ್ತು ಅನ್ರಿಚ್ ನೋಕ್ಯಾ ಇಬ್ಬರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ತಿಂಗಳು ಹೆಬ್ಬೆರಳಿನ ಗಾಯದಿಂದಾಗಿ ನೋಕ್ಯಾ ಅವರನ್ನು ತಂಡದಿಂದ ಹೊರಗಿಡಲಾಗಿತ್ತು, ಇದರಿಂದಾಗಿ ಅವರು ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಮತ್ತೊಂದೆಡೆ, ನವೆಂಬರ್‌ನಲ್ಲಿ ತೊಡೆಸಂದು ನೋವಿನಿಂದಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಎನ್‌ಗಿಡಿ ತಪ್ಪಿಸಿಕೊಂಡರು.
ಇಬ್ಬರು ವೇಗಿಗಳು ತಂಡಕ್ಕೆ ಪುನಾರಗಮನ ಮಾಡಿದ ವೇಳೆ ಇಬ್ಬರು ವೇಗಿಗಳು ಗಾಯದ ಕಾರಣದಿಂದ ತಂಡದಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷ ಡರ್ಬನ್‌ನಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಉಂಟಾದ ತೊಡೆಸಂದು ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಮುಂಚೂಣಿಯ ವೇಗಿ ಜೆರಾಲ್ಡ್ ಕೋಟ್ಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿಲ್ಲ. ಮತ್ತೊಂದೆಡೆ ವೇಗಿ ನಾಂದ್ರೆ ಬರ್ಗರ್ ಅವರು ಸೊಂಟದ ನೋವಿನಿಂದ ಇನ್ನೂ ಗುಣಮುಖರಾಗದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ.
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾ), ಟೋನಿ ಡಿ ಜೊರ್ಜಿ, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ಅನ್ರಿಚ್ ನೋಕ್ಯಾ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವಾನ್ ಡೆರ್ ಡುಸ್ಸೆನ್.