Advertisement

ವರದಿ ಬಳಿಕ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು: ಸಚಿವ ಮುರುಗೇಶ ನಿರಾಣಿ

09:54 PM Dec 20, 2022 | Team Udayavani |

ಸುವರ್ಣ ವಿಧಾನಸೌಧ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲನ್ನು ಶೀಘ್ರದಲ್ಲಿ ನೀಡುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇನೆಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಸ್ವಲ್ಪ ದಿನಗಳಲ್ಲೇ ವರದಿ ನೀಡಲಿದ್ದಾರೆ. ಅದಾದ ನಂತರ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸರ್ಕಾರ ನಿರ್ಧರಿಸಲಿದೆ. ಆದರೂ, ಶೀಘ್ರದಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಸಂಪುಟದಲ್ಲಿ ಚರ್ಚಿಸುತ್ತೇನೆ ಎಂದರು.

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಯಡಿಯೂರಪ್ಪ ಸೇರಿ ಇತರರ ವಿರುದ್ಧ ನೀಡುತ್ತಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಯತ್ನಾಳ್‌ ಅವರು ಈ ಹಿಂದೆ ಕೇಂದ್ರ ಸಚಿವರಾಗಲು ಯಡಿಯೂರಪ್ಪ ಅವರೂ ಕಾರಣ. ಈಗ ಅವರು ಯಡಿಯೂರಪ್ಪ ಅವರ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಚಿವರಾಗಿರುವ ನಾನು, ಶಂಕರಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ್‌ ಅವರು ಸಮುದಾಯದವರಾಗಿದ್ದೇವೆ. ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲು ನೀಡುವುದಕ್ಕೆ ನಾವೂ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಈಶ್ವರಪ್ಪ, ಜಾರಕಿಹೊಳಿ ಸಚಿವರಾಗಬೇಕು
ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಅವರು ಸಚಿವರಾಗಲು ಅರ್ಹರಿದ್ದಾರೆ. ಅವರ ಮೇಲೆ ಮಾಡಲಾಗಿದ್ದ ಆರೋಪಗಳೆಲ್ಲವೂ ಈಗ ನಿವಾರಣೆಯಾಗಿದೆ. ಹೀಗಾಗಿ ಅವರು ಸಚಿವರಾಗಬಹುದು. ಪಕ್ಷಕ್ಕೆ ಹಾಗೂ ಸರ್ಕಾರ ರಚನೆಗೆ ಅವರ ಕೊಡುಗೆ ಸಾಕಷ್ಟಿದೆ. ಅವರನ್ನು ಸಚಿವರನ್ನಾಗಿ ಮಾಡಲು ನನ್ನ ಬೆಂಬಲವೂ ಇದೆ ಎಂದು ಮುರುಗೇಶ ನಿರಾಣಿ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next