ಕ್ವಿಟೋ(ಈಕ್ವೆಡಾರ್): ಮಹತ್ವದ ಸಭೆ ನಡೆಸಿದ ನಂತರ ಕಳಪೆ ರಸ್ತೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕೌನ್ಸಿಲರ್ ಅನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಈಕ್ವೆಡಾರ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Mumbai; ದಾಖಲೆಯ ಶತಕದೊಂದಿಗೆ ಕಮ್ ಬ್ಯಾಕ್ ಮಾಡಿದ ಪೃಥ್ವಿ ಶಾ
29 ವರ್ಷದ ಕೌನ್ಸಿಲರ್ ಡಯಾನಾ ಕಾರ್ನೆರೋ ಅವರು ಗುವಾಯಾಸ್ ನ ನರನ್ ಜಾಲ್ ಪ್ರದೇಶದಲ್ಲಿನ ಕಳಪೆ ಕಾಮಗಾರಿ ರಸ್ತೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಆಕೆಯ ಹಣೆಗೆ ಗುಂಡು ಹೊಡೆದು ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಡಯಾನಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅದಾಗಲೇ ಆಕೆ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ, ಆರೋಪಿಗಳನ್ನು ಸೆರೆಹಿಡಿಯಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ದಿನಗಳು ಅಂತ್ಯಗೊಂಡು, ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಬೇಕಾಗಿದೆ. ನಮ್ಮ ಜೀವವನ್ನೇ ಅಪಾಯದಲ್ಲಿಟ್ಟು ಬದುಕುವ ದಿನಗಳು ಕೊನೆಗಾಣಬೇಕಾಗಿದೆ ಎಂದು ಗುಯಾಕ್ವಿಲ್ ಡೆಪ್ಯುಟಿ ಮೇಯರ್ ಬ್ಲಾಂಕಾ ಲೋಪೆಝ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.