Advertisement

ಬೊಂಬೆಗಳ ಜತೆ ಮಗುವೂ ನಿರ್ಜೀವ! ; 29 ದಿನಗಳ ಮಗು ಕೊಂದ ಕಟುಕರು 

12:21 PM Dec 23, 2018 | |

ಬೆಂಗಳೂರು: ಕೌಟುಂಬಿಕ ಕಲಹದ ದ್ವೇಷದ ಹಿನ್ನೆಲೆಯಲ್ಲಿ, 29 ದಿನಗಳ ಗಂಡು ಮಗುವಿನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಮಂಚದ ಕೆಳಗೆ ಬಚ್ಚಿಟ್ಟಿದ್ದ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

Advertisement

“ನನ್ನ ಮೇಲಿನ ವೈಷಮ್ಯಕ್ಕೆ ನನ್ನ ತಂದೆ ಹಾಗೂ ಸಹೋದರನೇ ಮಗುವನ್ನು ಕೊಲೆಗೈದಿರುವ ಸಾಧ್ಯತೆಯಿದೆ’ ಎಂದು ಮೃತ ಮಗುವಿನ ತಂದೆ ಕಾರ್ತಿಕ್‌ ದೂರಿನಲ್ಲಿ ಆರೋಪಿಸಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ನೀಲಸಂದ್ರದ ಮನೆಯೊಂದರಲ್ಲಿ ಶುಕ್ರವಾರ ಸಂಜೆ ಹಾಸಿಗೆ ಮೇಲೆ ಮಲಗಿದ್ದ ಮಗುವಿನ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಮಂಚದ ಕೆಳಗೆ ಮೃತದೇಹ ಬಚ್ಚಿಟ್ಟಿದ್ದ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅಶೋಕನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಗುವಿನ ಮರಣೋತ್ತರ ಪರೀಕ್ಷೆ ವರದಿಯೂ ಬಂದಿದ್ದು, ಕೊಲೆ ಮಾಡಿರುವುದು ಖಚಿವಾಗಿದೆ. ಮಗುವಿನ ಕೊಲೆ ಪ್ರಕರಣ ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಕಾರ್ತಿಕ್‌ ಹಾಗೂ ಕುಟುಂಬ ಸದಸ್ಯರ ನಡುವೆ ಹಲವು ಬಾರಿ ಜಗಳ ನಡೆದಿದೆ. ಕೌಟುಂಬಿಕ ಕಲಹದ ಕಾರಣಕ್ಕೆ ಮಗು ಕೊಲೆಯಾಗಿರುವ ಶಂಕೆಯಿದೆ. ಕಾರ್ತಿಕ್‌ ಸೇರಿ ಕುಟುಂಬದ ಸದಸ್ಯರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಬೇಕಿದೆ. ಜತೆಗೆ, ಇನ್ನಿತರೆ ಆಯಾಮಗಳಲ್ಲೂ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಕಾರ್ತಿಕ್‌ ತಂದೆ, ರಕ್ಷಣಾ ಇಲಾಖೆಯ ನಿವೃತ್ತ ಸಿಬ್ಬಂದಿ ಚಿತ್ತರಾಜ್‌ (64) ಹಾಗೂ ಸಹೋದರ ಅರವಿಂದ ಬಾಬು ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

ಕಾರ್ತಿಕ್‌ರನ್ನು ಪ್ರೀತಿ ವಿವಾಹವಾಗಿದ್ದ ಸ್ಟೆಲ್ಲಾ, ನವೆಂಬರ್‌ 22ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಡೀ ಕುಟುಂಬ ನೀಲಸಂದ್ರದ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಮಗನ ಜತೆಗಿನ ಜಗಳದಿಂದ ತಂದೆ ಚಿತ್ತರಾಜ್‌, ಸಮೀಪದ ಮತ್ತೂಂದು ಮನೆಯಲ್ಲಿ ವಾಸವಿದ್ದರು. “ಶುಕ್ರವಾರ ಒಂದು ಮಗುವಿಗೆ ಹುಶಾರಿರಲಿಲ್ಲ. ಕಾರಣ, ಮತ್ತೂಂದು ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ.

ಆಸ್ಪತ್ರೆಯಿಂದ ಬಂದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಮನೆಯಲ್ಲಿ ಬಿಟ್ಟು, ಔಷಧ ತರಲು ಹೊರಗೆ ಹೋಗಿದ್ದೆ. ನಾನು ಮನೆಯಿಂದ ಹೊರಟ ಅರ್ಧ ಗಂಟೆ ನಂತರ ಕರೆ ಮಾಡಿದ ಪತ್ನಿ, ಮಗು ಕಾಣುತ್ತಿಲ್ಲ ಎಂದು ಹೇಳಿದಳು. ಕೂಡಲೇ, ಮನೆಗೆ ತೆರಳಿ ಹುಡುಕಾಡಿದರೂ ಮಗು ಪತ್ತೆಯಾಗಲಿಲ್ಲ. ಹೀಗಾಗಿ, ಪೊಲೀಸರಿಗೆ ದೂರು ನೀಡಿದೆ,’ ಎಂದು ಕಾರ್ತಿಕ್‌ ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ತಿಕ್‌ ನೀಡಿದ ದೂರಿನನ್ವಯ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ, ಅನುಮಾನದ ಮೇರೆಗೆ ಮನೆ ಪರಿಶೀಲಿಸಿದಾಗ ಕಬ್ಬಿಣದ ಮಂಚದ ಕೆಳಗೆ, ಬೊಂಬೆಗಳ ಜತೆ, ಕತ್ತುಬಿಗಿದ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಕೌಟುಂಬಿಕ ಜಗಳ
 ಪ್ರೀತಿಸಿ ವಿವಾಹವಾಗಿದ್ದ ಕಾರ್ತಿಕ್‌ ಈ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಆದರೆ, ಕಳೆದ ನಾಲ್ಕೈದು ತಿಂಗಳಿನಿಂದ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಈ ವಿಚಾರಕ್ಕೆ ತಂದೆ, ಸಹೋದರನ ನಡುವೆ ಜಗಳವಾಗುತ್ತಿತ್ತು. ಹಲವು ಬಾರಿ ಸಂಬಂಧಿಕರು ತಿಳಿ ಹೇಳಿದರೂ ಕಾರ್ತಿಕ್‌ ಕೇಳಿರಲಿಲ್ಲ. ಈ ಭಿನ್ನಾಭಿಪ್ರಾಯಗಳಿಂದಲೇ ತಂದೆ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸವಿದ್ದರು.

ಮಗು ಸಾವಿನ ಬಗ್ಗೆ ತಂದೆ ಹಾಗೂ ಸಹೋದರನ ಮೇಲೆ ಅನುಮಾನವಿದೆ ಎಂದು ಕಾರ್ತಿಕ್‌ ಆರೋಪ ಮಾಡಿದ್ದಾರೆ. ಆದರೆ, ಮಗುವಿನ ಕೊಲೆ ನಡೆದ ದಿನ ಏನಾಯಿತು ಎಂದು ಯಾರೊಬ್ಬರೂ ಸಂಪೂರ್ಣ ಮಾಹಿತಿ ಬಾಯ್ಬಿಡುತ್ತಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಸ್ಟೆಲ್ಲಾ ಒಂದು ಮಗುವನ್ನು ಎತ್ತಿಕೊಂಡು ಹಾಲ್‌ನಲ್ಲಿದ್ದರು. ಕೊಲೆಯಾದ ಮಗು ಮಂಚದ ಮೇಲೆ ಮಲಗಿತ್ತು. ಈ ವೇಳೆ ಚಿತ್ತರಾಜ್‌ ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೇರೆ ಮೂಲಗಳ ಪ್ರಕಾರ ಕಾರ್ತಿಕ್‌ನನ್ನು ವಿಚಾರಣೆ ನಡೆಸುವ ಅಗತ್ಯವಿದೆ. ದೂರಿನಲ್ಲೂ ಗೊಂದಲವಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next