ಚಿಂಚೋಳಿ: ತಾಲೂಕಿನಲ್ಲಿ ಜೂನ್ 25ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ರಾಜ್ಯ ಸರಕಾರ ಸೂಚಿಸಿದ ಎಸ್‌ಒಪಿ ಮಾರ್ಗಸೂಚಿ ಪ್ರಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ 2890 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲಿದ್ದಾರೆ ಎಂದು ಬಿಇಒ ದತ್ತಪ್ಪ ತಳವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳಿಗೆ ಕೋವಿಡ್-19 ಕುರಿತು ಭಯ ಸೃಷ್ಟಿಯಾಗಬಾರದು ಎಂದು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು ಪರೀಕ್ಷಾ ಕೇಂದ್ರಗಳನ್ನು ದಿನನಿತ್ಯ ಸ್ಯಾನಿಟೈಸರ್ ಮಾಡಲಾಗುವುದು. ಶಾಸಕ ಡಾ| ಅವಿನಾಶ ಜಾಧವ 3000, ಅಜೀಂ ಪ್ರೇಮಜಿ ಪೌಂಡೇಶನ್ 2500 ಮಾಸ್ಕ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ನೀಡಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ನೇಮಕ ಮತ್ತು ಪರೀಕ್ಷೆಯಲ್ಲಿ ಯಾವುದೇ ಅಡ್ಡಿ ಆಗದಂತೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಪೋಷಕರು ಮತ್ತು ಪಾಲಕರು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸದಂತೆ 200 ಮೀಟರ್ ಪ್ರದೇಶವನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ 3 ಮೀಟರ್ ಅಂತರ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಕೋಣೆಯಲ್ಲಿ ಕೇವಲ 20 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ದಿನಕ್ಕೆ 8 ಲೀಟರ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ 443, ಸರಕಾರಿ ಕನ್ಯಾ ಪ್ರೌಢಶಾಲೆ ಚಿಂಚೋಳಿ 399, ಕರ್ನಾಟಕ ಪಬ್ಲಿಕ್ ಶಾಲೆ ಸುಲೇಪೇಟ 451, ಸರಕಾರಿ ಪ್ರೌಢಶಾಲೆ ಚಿಮ್ಮನಚೋಡ 282, ಸುಲೇಪೇಟ ಬಿ.ಬಿ. ಸಜ್ಜನಶೆಟ್ಟಿ ಪ್ರೌಢಶಾಲೆ 420, ಸರಕಾರಿ ಪ್ರೌಢಶಾಲೆ ದೇಗಲಮಡಿ 288, ಸರಕಾರಿ ಪ್ರೌಢಶಾಲೆ ರಟಕಲ್ 350, ಸರಕಾರಿ ಪ್ರೌಢಶಾಲೆ ಚಂದನಕೇರಾ 355 ಸೇರಿದಂತೆ ಒಟ್ಟು 2890 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಬೇರೆ ಜಿಲ್ಲೆಗಳ ಒಟ್ಟು 99 ವಿದ್ಯಾರ್ಥಿಗಳು ಇದ್ದಾರೆ ಎಂದು ವಿವರಿಸಿದರು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 20 ಸರಕಾರಿ ಬಸ್ ಮತ್ತು ಆರು ಖಾಸಗಿ ಶಾಲಾ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ನೋಡಲ್ ಅಧಿಕಾರಿ ದೇವೇಂದ್ರಪ್ಪ ಹೋಳಕರ, ಶ್ರೀಶೈಲ ನಾಗಾವಿ ಇದ್ದರು.