ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ. ಇಂದು ಜಿಲ್ಲೆಯಲ್ಲಿ 282 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6201ಕ್ಕೆ ಏರಿಕೆಯಾಗಿದೆ.
ಉಡುಪಿ ತಾಲೂಕಿನಲ್ಲಿ 152 ಜನರಿಗೆ ಸೋಂಕು ದೃಢವಾಗಿದ್ದು, ಕುಂದಾಪುರದಲ್ಲಿ 86 ಜನರಿಗೆ, ಕಾರ್ಕಳ ತಾಲೂಕಿನಲ್ಲಿ 43 ಜನರಿಗೆ ಇಂದು ಸೋಂಕು ದೃಢವಾಗಿದೆ. 282 ಪ್ರಕರಣಗಳ ಪೈಕಿ 77 ಜನರಿಗೆ ಸೋಂಕು ಲಕ್ಷಣಗಳಿದ್ದು, ಉಳಿದ 205 ಜನರಿಗೆ ಯಾವುದೇ ರೋಗಲಕ್ಷಣಗಳಿಲ್ಲ.
135 ಮಹಿಳೆಯರಿಗೆ ಸೋಂಕು ದೃಢವಾಗಿದ್ದು, 147 ಪುರುಷರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 44,824 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, 37,325 ಜನರ ವರದಿ ನೆಗೆಟಿವ್ ಆಗಿದೆ. 6201 ಜನರ ವರದಿ ಪಾಸಿಟಿವ್ ಆಗಿದ್ದು, ಇನ್ನೂ 1298 ಮಾದರಿ ಪರೀಕ್ಷಾ ವರದಿ ಬಾಕಿಯಿದೆ.
ಜಿಲ್ಲೆಯಲ್ಲಿಂದು ಯಾವುದೇ ಸಾವು ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 60 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.