Advertisement

School: ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಗೆ 279.77 ಕೋ. ರೂ.

10:05 PM Aug 10, 2023 | Team Udayavani |

ಬೆಂಗಳೂರು: ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ್ದಂತೆ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸಲು ರಾಜ್ಯ ಸರಕಾರ 279.77 ಕೋಟಿ ರೂ.ಗಳ ಅನುದಾನ ಭರಿಸಲು ಅನುಮತಿ ನೀಡಿದೆ.

Advertisement

ಕ್ಷೀರಭಾಗ್ಯ ಯೋಜನೆಗೆ ನಿಗದಿಪಡಿಸಿದ್ದ 1,166.43 ಕೋ. ರೂ. ಪೈಕಿ 235.50 ಕೋ.ರೂ.ಗಳನ್ನು ಭರಿಸಲು ಅನುಮತಿ ನೀಡಿದೆ. ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ 412 ಕೋ. ರೂ. ಕೇಂದ್ರದ ಪಾಲಿನಲ್ಲಿ 26.56 ಕೋ. ರೂ. ಮತ್ತು 271.93 ಕೋ. ರೂ. ರಾಜ್ಯದ ಪಾಲಿನಲ್ಲಿ 17.70 ಕೋ. ರೂ.ಗಳನ್ನು ಭರಿಸಲು ಅನುಮತಿ ಕೊಡಲಾಗಿದೆ.

ಈ ಹಿಂದೆ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ವಿತರಿಸುತ್ತಿದ್ದ ಪೂರಕ ಪೌಷ್ಟಿಕಾಂಶಗಳನ್ನು ವಾರದಲ್ಲಿ ಎರಡು ದಿನಗಳಿಗೆ ವಿಸ್ತರಿಸಿರುವ ಸರಕಾರ, 9 ಮತ್ತು 10ನೇ ವಿದ್ಯಾರ್ಥಿಗಳೂ ಸಹಿತ ಒಟ್ಟು 60 ಲಕ್ಷ ಮಕ್ಕಳಿಗೆ 80 ದಿನಗಳು ಪೂರಕ ಪೌಷ್ಟಿಕಾಂಶವುಳ್ಳ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣನ್ನು ವಿತರಿಸಲು ಈ ಹಣವನ್ನು ವಿನಿಯೋಗಿಸಬೇಕೆಂದು ಆದೇಶಿಸಿದೆ.

ಉತ್ತಮ ಗುಣಮಟ್ಟದ್ದನ್ನೇ ಖರೀದಿಸಬೇಕು
ಪೂರಕ ಪೌಷ್ಟಿಕಾಂಶಗಳ ಖರೀದಿ ಪ್ರಕ್ರಿಯೆಯನ್ನು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಚಾಲ್ತಿಯಲ್ಲಿರುವ ಸಂಗ್ರಹಣಾ ನಿಯಮಗಳನ್ನು ಪಾಲಿಸಿ ನಿರ್ವಹಿಸಬೇಕು. ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆಹಣ್ಣಿನ ಗುಣಮಟ್ಟ ಪರಿಶೀಲಿಸಿ ಖಾತ್ರಿಪಡಿಸಿಕೊಂಡು ಖರೀದಿಸಬೆಕು. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಗ್ರಹಿಸಿ ವಿತರಿಸಬೇಕು. ಈ ಮಾಹಿತಿಯನ್ನು ಎಸ್‌ಎಟಿಎಸ್‌ ಎಂಡಿಎಂ ತಂತ್ರಾಂಶದಲ್ಲಿ ಸಂಗ್ರಹಿಸಬೇಕು.

ಸಾರ್ವಜನಿಕರಿಂದ ದೂರು ಬಾರದಂತೆ ನಿರ್ವಹಿಸಲು ಹೊಣೆ
ವಿತರಣೆಗೆ ಸಂಬಂಧಿಸಿದ ಮೇಲ್ವಿಚಾರಣೆಯನ್ನು ಸಿಆರ್‌ಪಿ, ಬಿಆರ್‌ಪಿ ತಾಲೂಕು ಹಂತದ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಣಾಧಿಕಾರಿ, ಉಪನಿರ್ದೇಶಕ (ಆಡಳಿತ) ರು ಪರಿಣಾಮಕಾರಿಯಾಗಿ ಸಾರ್ವಜನಿಕರಿಂದ ಯಾವುದೇ ದೂರು ಬಾರದಂತೆ ನಿರ್ವಹಿಸಬೇಕು. ವೆಚ್ಚಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಸೂಕ್ತ ಲೆಕ್ಕಪತ್ರ ಇಡಬೇಕು. ಇದರ ಮೇಲ್ವಿಚಾರಣೆಯನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ನಿರ್ವಹಿಸಬೇಕು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next