Advertisement

24 ವರ್ಷವಾದರೂ 272 ಫಲಾನುಭವಿಗೆ ಸಿಕ್ಕಿಲ್ಲ ಹಕ್ಕುಪತ್ರ

12:23 PM Jul 11, 2017 | Team Udayavani |

ದಾವಣಗೆರೆ: ಜಗಳೂರು ಪಟ್ಟಣದಲ್ಲಿ 1993-94ನೇ ಸಾಲಿನ ಆಶ್ರಯ ಯೋಜನೆಯಡಿ ಮಂಜೂರಾಗಿರುವ ನಿವೇಶನಗಳ ಹಕ್ಕುಪತ್ರ
ವಿತರಣೆಗೆ ಒತ್ತಾಯಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.

Advertisement

ಜಗಳೂರು ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ 1993-94ನೇ ಸಾಲಿನ ಆಶ್ರಯ ಯೋಜನೆಯಡಿ ಸರ್ವೇ ನಂ. 99ರಲ್ಲಿ 272 ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗಿತ್ತು. ಅದರಲ್ಲಿ ಅನೇಕರು ಕಂದಾಯ ಪಾವತಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಫಲಾನುಭವಿಗೆ ಹಕ್ಕುಪತ್ರ ನೀಡಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ನಿವೇಶನ ಮಂಜೂರಾಗಿ 25 ವರ್ಷವೇ
ಕಳೆದರೂ ಈ ಕ್ಷಣಕ್ಕೂ ಅನೇಕರು ಹಕ್ಕುಪತ್ರಕ್ಕೆ ಅಲೆಯುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಆಶ್ರಯ ಯೋಜನೆಯಡಿ 272 ಫಲಾನುಭವಿಗಳಿಗೆ ಮಂಜೂರಾಗಿದ್ದ ನಿವೇಶನಕ್ಕೆ ಅಲೆಯುವ ಸಂದರ್ಭದಲ್ಲಿ ಕೆಲವಾರು
ಜನಪ್ರತಿನಿಧಿಗಳು ನಿಮಗೆ ನೀಡಿರುವ ಜಾಗ ಊರಿಗೆ ದೂರವಾಗುತ್ತದೆ. ಕುಡಿಯುವ ನೀರು ಮತ್ತಿತರ ಸೌಲಭ್ಯ ಇಲ್ಲ. ಬೇರೆಯ
ಕಡೆ ಕೊಡುತ್ತೇವೆ ಎಂದು ಹೇಳುತ್ತಲೇ ಕಾಲದೂಡಿದರು. ಒಂದು ಕಡೆ ಹಕ್ಕುಪತ್ರ ಇಲ್ಲ. ಇನ್ನೊಂದು ಕಡೆ ಜನಪ್ರತಿನಿಧಿಗಳು
ಹೇಳಿದಂತೆ ಜಾಗವೂ ಸಿಗದೇ ಸಾರ್ವಜನಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ, ಈವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಗಳು ಈ ಫಲಾನುಭವಿಗಳ ಬಗ್ಗೆ ಗಮನ ನೀಡುತ್ತಿಲ್ಲ  ಎಂದು ದೂರಿದರು.

ನಿವೇಶನ ಮಂಜೂರಾದ ನಂತರ ಹಕ್ಕುಪತ್ರ ಕೇಳಲಿಕ್ಕೆ ಹೋದಾಗ ಅಧಿಕಾರಿಗಳು ಸಂಬಂಧಿತ ಜಾಗದ ಬಗ್ಗೆ ದಾಖಲೆ ಇಲ್ಲ ಎಂಬ ಕಾರಣ ಹೇಳಿ ಕಳಿಸುತ್ತಿದ್ದರು. ಅದೇ ಜಾಗದಲ್ಲಿ ಕ್ರೀಡಾಂಗಣ, ಪ್ರಥಮ ದರ್ಜೆ ಕಾಲೇಜು ಮತ್ತಿತರದ್ದಕ್ಕೆ ಅನುಮತಿ ನೀಡಲಾಗಿದೆ. ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಇರದ ದಾಖಲೆ ಕ್ರೀಡಾಂಗಣ, ಪ್ರಥಮ ದರ್ಜೆ ಕಾಲೇಜು ಮತ್ತಿತರೆ ಕಟ್ಟಡಕ್ಕೆ ದಾಖಲೆ ಹೇಗೆ ದೊರೆಯುತ್ತವೆ ಎಂದು ಪ್ರಶ್ನಿಸಿದರು.

ಫಲಾನುಭವಿಗಳು ಹಕ್ಕುಪತ್ರಕ್ಕೆ ಹೋರಾಟ ಮಾಡುತ್ತಲೇ ಇದ್ದಾರೆ. ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ಕೆ.ಎಲ್‌. ರಾಘವೇಂದ್ರ, ಆದಿಲ್‌ಖಾನ್‌ ಇತರರು ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.