ರತ್ನಗಿರಿ: ಖೇಡ್ ತಾಲೂಕಿನಲ್ಲಿ ಕೋವಿಡ್ ಹರಡುವಿಕೆಯು ಕಡಿಮೆಯಾಗುತ್ತಿರುವಾಗ ಇಲ್ಲಿನ ಗ್ರಾಮಯೊಂದರಲ್ಲಿ ಒಂದೇ ದಿನದಲ್ಲಿ 27 ಹೊಸ ಪ್ರಕರಣಗಳು ದೃಢಪಟ್ಟಿವೆ.
ಖೇಡ್ ತಾಲೂಕಿನ ಅಂಬಾವಲಿ ವರ್ವಾಲಿ ಧುಪೆ ವಾಡಿಯಲ್ಲಿ 27 ಮಂದಿಯ ಕೊರೊನಾ ವರದಿಯು ಪಾಸಿಟಿವ್ ಬಂದಿದೆ ಎಂದು ತಾಲೂಕು ವೈದ್ಯಕೀಯ ಅಧಿಕಾರಿ ಡಾ| ಆರ್. ಬಿ. ಶೆಲ್ಕೆ ಮಾಹಿತಿ ನೀಡಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ಸಮೀಕ್ಷೆ ನಡೆಸಲಾಗಿದೆ.
ಆರೋಗ್ಯ ಇಲಾಖೆಯ ಪ್ರಕಾರ, ಫೆ. 9ರಂದು, ವರ್ವಾಲಿ ಧುಪೆವಾಡಿ ಮೂಲದ ವ್ಯಕ್ತಿಯೋರ್ವರ ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಅಂಬಾವಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ಅವರ ಸಂಪರ್ಕಕ್ಕೆ ಬಂದ 47 ಮಂದಿಯ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ರವಿವಾರ ತಡರಾತ್ರಿ ಬಂದ ವರದಿ ಪ್ರಕಾರ ಈ 47 ಮಂದಿ ಪೈಕಿ 27 ಮಂದಿ ಸೋಂಕಿಗೆ ಗುರಿಯಾಗಿರುವುದು ದೃಢಪಟ್ಟಿದೆ.
ವರ್ವಾಲಿ ಧುಪೆವಾಡಿಯ ಜನಸಂಖ್ಯೆಯು ಸುಮಾರು 150ರಷ್ಟಿದ್ದು, ಇದರ ಸುತ್ತಮುತ್ತಲಿರುವ ಥಾಣಾಕೇಶ್ವರವಾಡಿ, ಸುತರ್‌ವಾಡಿ, ದೇವುಲ್ವಾಡಿ, ಗಾಂವ್‌ಥಾಣಾವಾಡಿ ಮತ್ತು ಧನಗರ್‌ವಾಡಿಗಳಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸಂತ್ರಸ್ತರೆಲ್ಲರೂ ಕಲಾºನಿ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಂಪರ್ಕದಲ್ಲಿರುವ ಹಳ್ಳಿಯ ಇತರ ಜನರ ಸ್ವಾಬ್‌ಗಳನ್ನು ಸಹ ತೆಗೆದುಕೊಳ್ಳಲಾಗಿದೆ.
ನ್ಯೂ ಇಂಗ್ಲಿಷ್ ಶಾಲೆ ಮತ್ತು ಜೂನಿಯರ್ ಕಾಲೇಜು ಅಂಬಾವಾಲಿಯ ವಿದ್ಯಾರ್ಥಿಯೊಬ್ಬರ ವರದಿ ಪಾಸಿಟಿವ್ ಬಂದ ಕಾರಣ ಫೆ. 15ರಿಂದ 20ರ ವರೆಗೆ ಕಾಲೇಜನ್ನು ಮುಚ್ಚಲಾಗಿದೆ. ಅಂತಹ ಸೂಚನೆ ಗಳನ್ನು ಶಾಲೆಯಿಂದ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ವರದಿ ಬಳಿಕ ವೈದ್ಯಕೀಯ ಅಧಿಕಾರಿ ಡಾ| ಶೆಲ್ಕೆ ಅವರೊಂದಿಗೆ ಸಿಬಂದಿ ವರ್ವಾಲಿ ಗ್ರಾಮದಲ್ಲಿ ಕೋವಿಡ್ ಪರೀಕ್ಷೆ ಕ್ರಮಗಳನ್ನು ಪ್ರಾರಂಭಿಸಿದ್ದಾರೆ.