ವರದಿ : ಶಿವಶಂಕರ ಕಂಠಿ
ಹುಬ್ಬಳ್ಳಿ: ಕೋವಿಡ್-19ರ 2ನೇ ಅಲೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವಲಯ ಸಿದ್ಧವಾಗಿದ್ದು, ಅದು ತನ್ನ ಮೂರು ವಿಭಾಗಗಳಲ್ಲಿ 265 ಐಸೋಲೇಷನ್ ಬೋಗಿಗಳನ್ನು ವಿನ್ಯಾಸಗೊಳಿಸಿದೆ.
ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಲ್ಲಿ 73, ಮೈಸೂರು 95, ಹುಬ್ಬಳ್ಳಿ ವಿಭಾಗದಲ್ಲಿ 90 ಸೇರಿ ಒಟ್ಟು 265 ಐಷೋಲೇಷನ್ ಬೋಗಿಗಳನ್ನು ವಿನ್ಯಾಸ ಪಡಿಸಿದೆ. ಪ್ರತಿ ಬೋಗಿಯಲ್ಲಿ ಒಬ್ಬರಿಗಾಗಿ ಎಂಟು ಬೆಡ್, ಇಬ್ಬರಿಗಾಗಿ 16 ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಮನೆಯಲ್ಲಿ ಐಸೋಲೇಷನ್ ಪಡೆಯಲು ಸಾಧ್ಯವಾಗದಿದ್ದರೆ ಅಂಥವರು ಈ ಬೋಗಿಗಳಲ್ಲಿ ಇರಬಹುದಾಗಿದೆ.
ವಲಯವು ಕೋವಿಡ್-19ರ 1ನೇ ಅಲೆಯ ಸಂದರ್ಭದಲ್ಲೂ ಸೋಂಕಿತರಿಗಾಗಿ 320 ಬೋಗಿಗಳನ್ನು ಐಷೋಲೇಷನ್ ಆಗಿ ಪರಿವರ್ತಿಸಿತ್ತು. ಆದರೆ ರಾಜ್ಯ ಸರಕಾರದಿಂದ ಇವುಗಳಿಗೆ ಬೇಡಿಕೆ ಬಾರದ ಹಿನ್ನೆಲೆಯಲ್ಲಿ ಕೇವಲ 62 ಬೋಗಿಗಳನ್ನು ಇಲಾಖೆಯ ಉದ್ದೇಶಗಳಿಗಾಗಿ ಬಳಸಿಕೊಂಡಿತ್ತು. ಈಗ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಲಯವು ರಾಜ್ಯ ಸರಕಾರದಿಂದ ಬೇಡಿಕೆ ಬರಹುದೆಂಬ ನಿರೀಕ್ಷೆಯಲ್ಲಿ ಮುಂಜಾಗ್ರತೆಯಾಗಿ ಕಳೆದ ವರ್ಷ ಬಳಸಿಕೊಳ್ಳದಿರುವ 258 ಬೋಗಿಗಳನ್ನು ಮತ್ತೆ ಕೋವಿಡ್ ಐಷೋಲೇಷನ್ ಆಗಿ ಪರಿವರ್ತಿಸಿ ಕೊಡಲು ಸನ್ನದ್ಧಗೊಂಡಿದೆ.
ಐಷೋಲೇಷನ್ ಬೋಗಿಗಳನ್ನು ಬೆಂಗಳೂರಿನ ಕೆಎಸ್‌ಆರ್, ಯಶವಂತಪುರ, ಮೈಸೂರು, ಹುಬ್ಬಳ್ಳಿಯ ಕಾರ್ಯಾಗಾರಗಳಲ್ಲಿ ಸಿದ್ಧಪಡಿಸಿ ಇಡಲಾಗಿದೆ. ಸರಕಾರ ಇವುಗಳ ಬಳಕೆಗೆ ಕೋರಿದ ಕೂಡಲೇ ನೀಡಲು ಸಿದ್ಧವಾಗಿದೆ. ಕೋವಿಡ್ ಲಕ್ಷಣಗಳನ್ನು ಹೊಂದಿರದ ಹಾಗೂ ಯಾರಿಗೆ ಮನೆಯಲ್ಲಿ ಐಷೋಲೇಷನ್ ಮಾಡಿ ಕೊಳ್ಳಲು ಸೌಲಭ್ಯ ಇರುವುದಿಲ್ಲವೋ ಅಂಥವರಿಗೆ ಈ ಐಷೋಲೇಷನ್ ಬೋಗಿಗಳು ಉಪಯುಕ್ತವಾಗಿವೆ.
ಇಲ್ಲಿ ಕೋವಿಡ್-19ರ ಲಕ್ಷಣಗಳಿಲ್ಲದವರು ಪ್ರತ್ಯೇಕ ಆರೈಕೆ ಹಾಗೂ ಸಮಾಧಾನಕರ ರೀತಿ ವಿಶ್ರಾಂತಿ ಪಡೆಯಬಹುದಾಗಿದೆ. ರಾಜ್ಯ ಸರಕಾರ ಈಗಾಗಲೇ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇಂದ್ರಗಳನ್ನು ನಿರ್ಮಿಸಿದೆ. ಕಿಮ್ಸ್ ಆಸ್ಪತ್ರೆ ಸೇರಿದಂತೆ ಇನ್ನುಳಿದೆಡೆ ಬೆಡ್‌ಗಳ ಸಂಖ್ಯೆಯನ್ನು ಕಳೆದ ಬಾರಿಗಿಂತ ದುಪ್ಪಟ್ಟು ಮಾಡಿದೆ. ಈ ಬಾರಿಯಾದರೂ ನೈಋತ್ಯ ರೈಲ್ವೆ ವಲಯವು ಸಿದ್ಧಪಡಿಸಿದ ಐಸೋಲೇಷನ್ ಬೋಗಿಗಳನ್ನು ಬಳಕೆ ಮಾಡಿಕೊಳ್ಳುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.