ವಾಷಿಂಗ್ಟನ್: ಅಮೆರಿಕದ ಪೂರ್ವ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಜೊತೆಗೆ ಸುಂಟರಗಾಳಿ ಬೀಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 2,600 ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ.
ಕಳೆದ ಕೆಲ ದಿನಗಳಿಂದ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಸಾಕಷ್ಟು ಅನಾಹುತಗಳು ಸಂಭವಿಸಿವೆ. ಅಲ್ಲದೆ ಗಾಳಿ ಮಳೆಯ ಹೊಡೆತಕ್ಕೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಚಂಡಮಾರುತ ಬೀರುವ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರ ಬರದೆ, ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಕೆಲವೊಂದು ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ಚಂಡಮಾರುತದ ಭೀತಿಯಿಂದ ನ್ಯೂಯಾರ್ಕ್ ನಗರ ಪ್ರದೇಶ, ಫಿಲಡೆಲಿಯಾ, ವಾಷಿಂಗ್ಟನ್, ಚಾರ್ಲೆಟ್ ಮತ್ತು ಅಟ್ಲಾಂಟಾದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಗಾಳಿ, ಮಳೆ, ಮಿಂಚು ಸಹಿತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯ ಎಲ್ಲ ಫೆಡರಲ್ ಕಚೇರಿಗಳನ್ನು ಸೋಮವಾರದಂದು ಮಧ್ಯಾಹ್ನವೇ ಮುಚ್ಚಲಾಯಿತು. ಜೊತೆಗೆ ಕೆಲಸ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿಗಳನ್ನು ಮನೆಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Udupi Video Scandal: ಉಡುಪಿಗೆ ಆಗಮಿಸಿದ ಸಿಐಡಿ ತಂಡ