ಕಲಬುರಗಿ: ಕೋವಿಡ್ ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಿದ್ದು, ಇನ್ಮುಂದೆ ಜಿಲ್ಲೆಯ 26 ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯಬಹುದಾಗಿದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಹಯೋಗದಲ್ಲಿರುವ 26 ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ಆಸ್ಪತ್ರೆಗಳು ಇನ್ಮುಂದೆ ಕೋವಿಡ್ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಬಹುದಾಗಿದೆ. ಆದರೆ, ಸೋಂಕಿತರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಆಸ್ಪತ್ರೆಗಳು ಹೊಂದಿರಲೇಬೇಕು. ಚಿಕಿತ್ಸೆ ನೀಡಲು ವಿಶೇಷ ವಾರ್ಡ್, ವೈದ್ಯಕೀಯ ಸಿಬ್ಬಂದಿ ಸುರಕ್ಷತಾ ಕಿಟ್ ಧರಿಸುವುದು ಮತ್ತು ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯಗೊಳಿಸಲಾಗಿದೆ. ಸೋಂಕಿತರ ದಾಖಲಾತಿ, ಚಿಕಿತ್ಸೆ ನೀಡುವ ಮುನ್ನ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಖಾಸಗಿ ಆಸ್ಪತ್ರೆಗಳು ಮಾಹಿತಿ ನೀಡಬೇಕು. ರೋಗಿಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿತ್ಯವೂ ವರದಿ ಒಪ್ಪಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವ್ಯಾವ ಆಸ್ಪತ್ರೆ ಆಯ್ಕೆ?: ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಎಲ್ಲ 26 ಖಾಸಗಿ ಆಸ್ಪತ್ರೆಗಳು ನಗರ ಪ್ರದೇಶದಲ್ಲೇ ಇವೆ. ಸಿದ್ರಾಮೇಶ್ವರ ಕಣ್ಣಿನ ಕ್ಲಿನಿಕ್, ಶ್ರೀ ಶಿವಶಂಕ್ರಪ್ಪ ನಂದ್ಯಾಲ ಕಣ್ಣಿನ ಕೇರ್ ಸೆಂಟರ್, ರಾಜಲಕ್ಷ್ಮೀ ಕಿಡ್ನಿ ಆಸ್ಪತ್ರೆ, ಕಮಲ್ ಕಣ್ಣಿನ ಆಸ್ಪತ್ರೆ, ಡಾ|ಪಾಟಿಲ್ಸ್ ಇಎನ್‌ಟಿ ಸೆಂಟರ್, ನಿಷ್ಠಿ ಮೆಮೋರಿಯಲ್ ಹಾರ್ಟ್ ಸೆಂಟರ್, ಚಿರಂಜೀವಿ ಆಸ್ಪತ್ರೆ, ವಿ.ಎಲ್. ಪಾಟೀಲ ಆಸ್ಪತ್ರೆ, ಅನ್ವಿಕಾ ಆಸ್ಪತ್ರೆ, ಚಿರಾಯು ಆಸ್ಪತ್ರೆ, ಕೆಬಿಎನ್, ನೇತ್ರಜ್ಯೋತಿ ಕಣ್ಣಿನ ಆಸ್ಪತ್ರೆ, ಮದರ್ ಥೇರೆಸಾ ಚಾರಿಟೇಬಲ್ ಆಸ್ಪತ್ರೆ, ಸತ್ಯ ಆಸ್ಪತ್ರೆ, ಪಾಟೀಲ ನರ್ಸಿಂಗ್ ಹೋಂ, ಬಸವೇಶ್ವರ ಆಸ್ಪತ್ರೆ, ಯುನಿಟೈಡ್ ಆಸ್ಪತ್ರೆ, ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ, ಕಮರೆಡ್ಡಿ ಆಸ್ಪತ್ರೆ, ಟಿಪ್ಪು ಸುಲ್ತಾನ್ ಆಸ್ಪತ್ರೆ, ಗುಲಬರ್ಗಾ ಹಾರ್ಟ್ ಫೌಂಡೇಷನ್, ಜೀವನ್ ಆಸ್ಪತ್ರೆ, ಬಹಮನಿ ಆಸ್ಪತ್ರೆ, ಗಿರೀಶ ಕಿಡ್ನಿ ಆಸ್ಪತ್ರೆ, ಬೋರುಕಾ ನೇತ್ರಾಲಯ, ಮೆಡಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಸರ್ಕಾರಿ ಬೆಡ್‌ಗಳೇ ಖಾಲಿ: ದೇಶದಲ್ಲೇ ಕೋವಿಡ್ ಗೆ ಮೊದಲ ಬಲಿ ಜಿಲ್ಲೆಯಲ್ಲಿ ಆಗಿದ್ದರಿಂದ ಜಿಲ್ಲಾಡಳಿತ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಮ್ಸ್ ಮತ್ತು ಇಎಸ್‌ಐ ಆಸ್ಪತ್ರೆಗಳನ್ನು ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲಿರಿಸಲಾಗಿದೆ. ಮಹಾರಾಷ್ಟ್ರದಿಂದ ಕೂಲಿ ಕಾರ್ಮಿಕರು ಆಗಮಿಸಿದ್ದರಿಂದ ಕೋವಿಡ್ ಮಹಾ ಸ್ಫೋಟ ಸಂಭವಿಸಿದೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ವಸತಿ ನಿಲಯ, ವಸತಿಗೃಹಗಳನ್ನು ಐಸೋಲೇಷನ್ ವಾರ್ಡ್‌ಗಳನ್ನಾಗಿ ಸಜ್ಜುಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ 3500 ಬೆಡ್‌ಗಳ ವ್ಯವಸ್ಥೆಯಾಗಿದೆ. ಈ ತಿಂಗಳ ಆರಂಭದಲ್ಲಿ ಸೋಂಕಿತರ ಪ್ರಕರಣಗಳು ದಿಢೀರನೆ ಏರಿಕೆಯಾದ ಪರಿಣಾಮ ಖುದ್ದು ಸರ್ಕಾರವೇ ಬೆಡ್‌ಗಳ ಸಾಮರ್ಥಯವನ್ನು 7500ಕ್ಕೆ ಹೆಚ್ಚಿಸುವಂತೆ ಸೂಚಿಸಿತ್ತು. ಜಿಲ್ಲೆಯಲ್ಲಿ ಇದುವರೆಗೆ ರವಿವಾರದವರೆಗೆ 1199 ಜನರಿಗೆ ಸೋಂಕು ದೃಢಪಟ್ಟಿದೆ. 697 ಜನರು ಈಗಾಗಲೇ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಸದ್ಯ 491 ಜನ ಸಕ್ರಿಯ ರೋಗಿಗಳು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಒಟ್ಟು 530 ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಕ್ವಾರಂಟೈನ್ ಪ್ರಕರಣಗಳಾಗಿ ಸ್ಥಾಪಿಸಲಾದ 579 ಬೆಡ್‌ಗಳು ಖಾಲಿ ಇವೆ. ಯುನಾನಿ ಆಸ್ಪತ್ರೆ-34, ಪಾಲಿ ಗೆಸ್ಟ್‌ಹೌಸ್-40, ಭೂಮಾಪನ ತರಬೇತಿ ಕೇಂದ್ರ-24, ಅಲ್ಪಸಂಖ್ಯಾತ ಇಲಾಖೆಯ ಹಾಸ್ಟೆಲ್-40, ಕೃಷಿ ವಿವಿಯ ಹಾಸ್ಟೆಲ್-41, ಸಿಯುಕೆ ಹಾಸ್ಟೆಲ್-80 ಹಾಗೂ ಸ್ಲಂಬೋರ್ಡ್ ವಸತಿ ನಿಲಯದಲ್ಲಿ 320 ಬೆಡ್‌ಗಳಿವೆ ಎನ್ನುತ್ತದೆ ಜಿಲ್ಲಾಡಳಿತ.
ಆಸ್ಪತ್ರೆಗಳ ಸಾಮರ್ಥ್ಯ : ಜಿಮ್ಸ್ ಆಸ್ಪತ್ರೆಯು 360 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 240 ಬೆಡ್‌ಗಳನ್ನು ನಿಗದಿಗೊಳಿಸಲಾಗಿದೆ. 40 ಐಸಿಯು ಬೆಡ್ ಗಳು ಇದ್ದರೆ, ಉಳಿದ 200 ಐಸೋಲೇಷನ್ ಬೆಡ್ ಗಳು ಇವೆ. ಇಎಸ್‌ಐ ಆಸ್ಪತ್ರೆಯಲ್ಲೂ 360 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗಾಗಿಯೇ ಸಿದ್ಧಪಡಿಸಲಾಗಿದೆ. ಇಲ್ಲೂ 20 ಐಸಿಯು ವಾರ್ಡ್ ಬೆಡ್‌ಗಳು ಇವೆ. 340 ಐಸೋಲೇಷನ್ ಬೆಡ್‌ಗಳ ವ್ಯವಸ್ಥೆ ಇದೆ. ಅಲ್ಲದೇ ಜಿಮ್ಸ್ ಪಕ್ಕದ ಟ್ರಾಮಾ ಸೆಂಟರ್‌ನಲ್ಲೂ 120 ಬೆಡ್‌ಗಳ ವ್ಯವಸ್ಥೆ ಈಗಾಗಲೇ ಸಿದ್ಧವಾಗಿದೆ. ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಕೊರೊನಾ ಹೊರತರಾದ ರೋಗಿಗಳಿಗಾಗಿ 300 ಹಾಸಿಗೆಗಳು ಇವೆ. ಇಲ್ಲಿ ಹೆರಿಗೆ ಪ್ರಕರಣಗಳು ಮತ್ತು ತಾಯಿ-ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ತುರ್ತು ಆರೋಗ್ಯ ಸೇವೆಗಾಗಿ ಈ ಆಸ್ಪತ್ರೆ ಬಳಕೆಯಾಗುತ್ತಿದೆ.
ಆಸ್ಪತ್ರೆ ನೋಡದ ಸೋಂಕಿತರು! : ನಿತ್ಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ, ಶೇ.90ರಿಂದ 95 ಜನರಿಗೆ ಕೋವಿಡ್ ಲಕ್ಷಣಗಳೇ ಇಲ್ಲ. ಆದ್ದರಿಂದ ಬಹುತೇಕ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ನಿಗದಿತ ಕೋವಿಡ್ ಆಸ್ಪತ್ರೆಗಳ ಮೆಟ್ಟಿಲೇರುತ್ತಿಲ್ಲ. ಆಸ್ಪತ್ರೆ ಮುಖವನ್ನು ನೋಡುತ್ತಿಲ್ಲ. ರವಿವಾರದ ವರೆಗೆ 491 ಜನ ಸಕ್ರಿಯ ಕೋವಿಡ್ ಪಾಸಿಟಿವ್ ರೋಗಿಗಳಿದ್ದರೂ, ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಒಳಗಾದವರು 108 ಜನ ಮಾತ್ರವೇ. ಜಿಮ್ಸ್‌ನಲ್ಲಿ 103 ಜನರಿದ್ದರೆ, ಇಎಸ್‌ಐ ಆಸ್ಪತ್ರೆಯಲ್ಲಿ ಕೇವಲ ಆರು ಸೋಂಕಿತರು ಇದ್ದಾರೆ. ಪಾಸಿಟಿವ್ ಬಂದು ಲಕ್ಷಣಗಳು ಕಂಡುಬಾರದ ರೋಗಿಗಳನ್ನು “ಸೂಪರ್‌ವೈಸ್ಡ್ ಐಸೋಲೇಷನ್ ಸೆಂಟರ್’ಗಳಲ್ಲಿ ದಾಖಲಿಸಲಾಗುತ್ತದೆ. ಇಂತಹ ಮೂರು ಸೆಂಟರ್‌ಗಳನ್ನು ಸದ್ಯ ಗುರುತಿಸಲಾಗಿದ್ದು, ಅಲ್ಲಿ 422 ಜನರನ್ನು ಪ್ರತ್ಯೇಕಗೊಳಿಸಿ ಇಡಲಾಗಿದೆ. ಇಲ್ಲಿ ಅವರಿಗೆ ಕೆಮ್ಮು, ಜ್ವರ ಹಾಗೂ ಇತರ ರೋಗಗಳು ಕಂಡುಬಂದಲ್ಲಿ ಮಾತ್ರ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಮಹಾರಾಷ್ಟ್ರದಿಂದ ಬಂದಿರುವ ಕೂಲಿಕಾರ್ಮಿಕರು ಮಧ್ಯ ವಯಸ್ಕರು ಆಗಿದ್ದು, ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದರಿಂದ ಸೋಂಕು ತಾನಾಗೇ ಬಂದು ಹೋಗಿರುವ ಸಾಧ್ಯತೆ ಇರುತ್ತದೆ. ಆದರೂ, ಪಾಸಿಟಿವ್ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು ಕಡ್ಡಾಯವಾಗಿದೆ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.
ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಈಗಾಗಲೇ ಬಸವೇಶ್ವರ ಆಸ್ಪತ್ರೆಯವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಅಲ್ಲಿ ಯಾವುದೇ ಕೋವಿಡ್ ರೋಗಿಗಳು ಇನ್ನು ದಾಖಲಾಗಿಲ್ಲ.
-ಶರತ್ ಬಿ., ಜಿಲ್ಲಾಧಿಕಾರಿ