ತುಮಕೂರು: ಜಿಲ್ಲೆಯಲ್ಲಿ ರಸ್ತೆ ಸುರಕ್ಷಾತಾ ನಿಯಮ ಉಲ್ಲಂಘಿಸಿರುವ 257 ವಾಹನ ಸವಾರರ ಚಾಲನಾ ಪರವಾನಗಿ ಹಾಗೂ 45 ವಾಹನ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತ ಹಾಗೂ ಸಾವು-ನೋವು ಸಂಭವಿಸುತ್ತಿವೆ. ಇದರ ತಡೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಘಾತ ತಡೆಗೆ ಜಿಲ್ಲಾ ಪೊಲೀಸ್ ಇಲಾಖೆ ಯಿಂದ ನಿರ್ಮಾಣಗೊಂಡಿರುವ ಕಿರು ಚಿತ್ರವನ್ನು ಎಲ್ಲಾ ಶಾಲಾ-ಕಾಲೇಜು, ಸಂಸ್ಥೆಗಳಲ್ಲಿ ಅರಿವು ಮೂಡಿಸಬೇಕು ಎಂದರು.
ಚಾಲಕರ ಆರೋಗ್ಯ ತಪಾಸಣೆ: ಬೇರೆ ವಿಭಾಗ ದಿಂದ ಬರುವ ಬಸ್‌ಗಳಿಂದ ಜಿಲ್ಲೆಯಲ್ಲಿ ಹೆಚ್ಚು ಅಪಘಾತವಾಗುತ್ತಿವೆ. ಕಳೆದ 2-3 ತಿಂಗಳಿಂದ ತುಮಕೂರು ವಿಭಾಗದ ಯಾವುದೇ ಬಸ್ ಅಪಘಾತಕ್ಕೆ ಈಡಾಗಿಲ್ಲ. ವಿಭಾಗದ ಚಾಲಕರ ಆರೋಗ್ಯ ಹಾಗೂ ಕಣ್ಣು ತಪಾಸಣೆ ಮಾಡ ಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ 364 ಪರವಾನಗಿ ಇರುವ ಮದ್ಯ ದಂಗಡಿಗಳಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡಬೇಡಿ ಎಂದು ನಾಮಫಲಕ ಹಾಕಲಾಗಿದೆ. ವಾಹನಗಳಲ್ಲಿ ಕುಳಿತು ಮದ್ಯ ಸೇವಿಸುವವರ ಬಗ್ಗೆ ಮಾಲೀಕರು ಪೊಲೀಸರಿಗೆ ತಿಳಿಸುವಂತೆ ಹೇಳಬೇಕು. ಶಿಕ್ಷಣ ಇಲಾಖೆಯಿಂದ ಎಲ್ಲಾ ಶಿಕ್ಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ತರಬೇತಿ ನೀಡ ಬೇಕು. ಅಪಘಾತ ಸಂದರ್ಭ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಪಿಎಸ್ ಅಳವಡಿಕೆಗೆ ಸೂಚನೆ: ನೂತನ ಮೋಟರ್ ವಾಹನ ಕಾಯ್ದೆ ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಎಲ್ಲಾ ಇಲಾಖೆಗಳ ಸಿಬ್ಬಂದಿಗೆ ಕಚೇರಿ ಅಧಿಕಾರಿಗಳು ಅರಿವು ಮೂಡಿಸಬೇಕು. ನಗರದಲ್ಲಿ 50 ನಗರ ಸಂಚಾರಿ ಬಸ್‌ಗಳು ಸಂಚರಿಸುತ್ತಿದ್ದು, ನಗರ ಸಾರಿಗೆ ಬಸ್‌ಗಳಿಗೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ ಜಿಪಿಎಸ್ ಅಳವಡಿಸಬೇಕು. ಸ್ಕ್ವಾಡ್ ರಚಿಸಿ ಈ ಬಗ್ಗೆ ನಿಗಾ ವಹಿಸಬೇಕು. ಕಾರ್ಮಿಕ ರನ್ನು ಸರಕು ಸಾಗಾಣೆ ವಾಹನಗಳಲ್ಲಿ ಕೊಂಡೊ ಯ್ಯುವಂತಿಲ್ಲ. ಇದು ಕಂಡು ಬಂದರೆ ವಾಹನ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
3 ಹಂತದ ಸ್ಪೀಡ್ ಬ್ರೇಕರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿಕೃಷ್ಣ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ 414 ಚಾಲನಾ ಪರವಾನಗಿಗಳ ಅಮಾನತಿಗೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ 257 ಡಿಎಲ್ ಅಮಾನತು ಮಾಡಲಾಗಿದೆ. ಅವಶ್ಯಕತೆ ಇರುವ ಕಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿರ್ಬಾ ಕ್ರಾಸಿಂಗ್, ಮಾರ್ಕಿಂಗ್, ಹಮ್ಸ್, ಅಪಘಾತ ಸ್ಥಳ, ತಿರುವುಗಳಲ್ಲಿ ಕಡ್ಡಾಯ ವಾಗಿ ಬೋರ್ಡ್ ಹಾಕಬೇಕು.
ತಮಿಳುನಾಡಿನ ಕೃಷ್ಣಗಿರಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಹಂತದ ಸ್ಪೀಡ್ ಬ್ರೇಕರ್ ಅಳವಡಿಸಳಾಗಿದೆ. ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಬೇಕು ಎಂದು ತಿಳಿಸಿದರು. ಸ್ಮಾರ್ಟ್‌ಸಿಟಿ ಲಿಮಿಟೆಡ್, ಆರ್‌ಟಿಒ, ಎಇಇ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದ್ದರು.