ಬೆಳಗಾವಿ: ಎರಡು ತಿಂಗಳಿಂದ ಲಾಕ್ ಡೌನ್‌ದಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮೇ 19ರಿಂದ ಮತ್ತೆ ಆರಂಭಗೊಳ್ಳಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಸ್‌ಗಳು ಸಂಚರಿಸಲಿವೆ.
ವಾಕರಸಾ ಸಂಸ್ಥೆಯ ಬಸ್‌ಗಳು ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳಿಗೆ ಸಂಚರಿಸಲಿವೆ. ಮಂಗಳವಾರದಿಂದ ರಾಜ್ಯ ಸರ್ಕಾರ ವಿಧಿಸಿರುವ ನಿಯಮದಂತೆ ಬೆಳಗ್ಗೆ 7 ಗಂಟೆಯಿಂದ ಬಸ್ ಕಾರ್ಯಾಚರಿಸಲಿವೆ. ನಗರ ಸೇರಿದಂತೆ ಗ್ರಾಮೀಣ ಹಾಗೂ ವಿವಿಧ ಕಡೆ ಬಸ್‌ಗಳ ಸಂಚಾರ ನಡೆಯಲಿದೆ.
ಈಗಾಗಲೇ ಕೇಂದ್ರ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಸಿದ್ಧತೆ ಮಾಡಿಕೊಂಡಿರುವ ವಾಕರಸಾಸಂಸ್ಥೆಯ ಸಿಬ್ಬಂದಿ, ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರಯಾಣಿಕರಿಗಾಗಿ ಮಾರ್ಕಿಂಗ್ ಹಾಕಲಾಗಿದ್ದು, ಗುರುತು ಹಾಕಿರುವ ಸ್ಥಳದಲ್ಲಿಯೇ ಕಡ್ಡಾಯವಾಗಿ ಪ್ರಯಾಣಿಕರು ನಿಂತು ಬಸ್ ಹತ್ತಬೇಕು. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಒಂದು ಆಗಮನ ಹಾಗೂ ಒಂದು ನಿರ್ಗಮನ ಮಾತ್ರ ಇದೆ. ಗುಂಪು ಕಟ್ಟಿಕೊಂಡು ಪ್ರಯಾಣಿಕರು ನಿಲ್ದಾಣದೊಳಗೆ ಬರುವಂತಿಲ್ಲ. ಒಳಗೆ ಬರುವಾಗ ಸ್ಯಾನಿಟೈಸ್, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು ಎಂದು ವಾಕರಸಾ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ಪತ್ರಿಕೆಗೆ ತಿಳಿಸಿದರು.
ಬಸ್‌ಗಳನ್ನೂ ಸ್ಯಾನಿಟೈಸ್ ಮಾಡಿಯೇ ಸಂಚಾರಕ್ಕೆ ಕಳುಹಿಸಲಾಗುವುದು. ಕಡ್ಡಾಯವಾಗಿ ಪ್ರಯಾಣಿಕರು ಮಾಸ್ಕ್ ಧರಿಸಿರಬೇಕು. ಚಾಲಕ-ನಿರ್ವಾಹಕರೂ ಮಾಸ್ಕ್ ಧರಿಸಬೇಕಾಗುತ್ತದೆ. ದೂರ ಸಂಚಾರ ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ 32 ಸೀಟುಗಳಿದ್ದು, ಶೇ. 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ಇದೆ ಎಂದು ತಿಳಿಸಿದರು.
ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಚಾಲಕ-ನಿರ್ವಾಹಕರನ್ನು ಬಳಸಿಕೊಳ್ಳುವುದಿಲ್ಲ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕ್ರಮೇಣವಾಗಿ ಬಸ್ ಕಾರ್ಯಾಚರಿಸಲಿವೆ ಎಂದು ವಿವರಿಸಿದರು.