Advertisement

ಪೊಡವಿಗೊಡೆಯನ ಬೀಡಿನಲ್ಲಿ ಸರಳ, ಸಾಂಪ್ರದಾಯಿಕ ಪರ್ಯಾಯ ಸಂಪನ್ನ

12:06 AM Jan 19, 2022 | Team Udayavani |

ಉಡುಪಿ: ಶ್ರೀ ಕೃಷ್ಣ ಮಠದ ಅಷ್ಟ ಮಠಗಳಲ್ಲಿ ಒಂದಾದ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂಭ್ರಮಕ್ಕೆ ಉಡುಪಿ ಸಾಕ್ಷಿಯಾಯಿತು. ಕೋವಿಡ್ ಕಾರಣದಿಂದ ಸರಳವಾಗಿ ನಡೆದರೂ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವೈಭವವಾಗಿ ಪರ್ಯಾಯ ಮೆರವಣಿಗೆ ನಡೆಯಿತು.

Advertisement

ಕೃಷ್ಣ ಮಠದ ಪರ್ಯಾಯ ಪೂಜೆಯ ಇತಿಹಾಸದ 251ನೇ ಪರ್ಯಾಯ ಪೂಜೆ, ಕೃಷ್ಣಾಪುರ ಮಠದ ಸರದಿಯಲ್ಲಿ ಶ್ರೀ ವಿದ್ಯಾಸಾಗರತೀರ್ಥ ಸ್ವಾಮಿಗಳ ಚತುರ್ಥ ಪರ್ಯಾಯ ಇದಾಗಿದೆ.

ಕೋವಿಡ್ ಹಿನ್ನೆಲೆ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ‌ ನೆರವೇರಬೇಕಿದ್ದ ಪರ್ಯಾಯೋತ್ಸವದ ಮೆರವಣಿಗೆ ಸರಳವಾಗಿ ನಡೆಯಿತು. ಸಾರ್ವಜನಿಕರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ನಿರಾಕರಿಸಿದ ಹೊರತಾಗಿಯೂ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುಮಾರು ಒಂದೂವರೆ ಕಿಮೀ ಉದ್ದದವರೆಗೂ ರಸ್ತೆ ಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿಂತ ಭಕ್ತರು ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಂಡರು.

ಇದನ್ನೂ ಓದಿ:501ನೇ ವರ್ಷಕ್ಕೆ ಉಡುಪಿ ಪರ್ಯಾಯ ಪೂಜಾಪದ್ಧತಿ

ಪ್ರತಿ ಬಾರಿ ಪರ್ಯಾಯ ಮೆರವಣಿಗೆಗೆ ಸೊಬಗು ತುಂಬುತ್ತಿದ್ದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಕೋವಿಡ್ ಕಾರಣದಿಂದ ನಿರ್ಬಂಧ ಹೇರಲಾಗಿದ್ದು, ಕೇವಲ ಮಠದಿಂದಲೇ ಬೆರಳೆಣಿಕೆಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬಂದವು.

Advertisement

ವೈಭವದಿಂದ ಸಾಗಿ ಬಂದ ಮೆರವಣಿಗೆ ರಥಬೀದಿ ತಲುಪಿದಾಗ ಸ್ವಾಮೀಜಿಗಳು ಪಲ್ಲಕ್ಕಿಯಿಂದ‌ ಇಳಿದು ರಥಬೀದಿಯಲ್ಲಿ ನಡೆದುಕೊಂಡು ಮುಂದೆ ಸಾಗಿದರು. ಬಳಿಕ‌ ಕೃಷ್ಣ ಮಠಕ್ಕೆ ಆಗಮಿಸಿ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನ ಪಡೆದಿದರು.

ಪರ್ಯಾಯ ಮುಗಿಸಿದ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿಯವರಿಂದ ಮಧ್ವಾಚಾರ್ಯರು ಅನುಗ್ರಹಿಸಿದ ಅಕ್ಷಯ ಪಾತ್ರೆಯನ್ನು ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು. ಬಳಿಕ ಪವಿತ್ರ ಸರ್ವಜ್ಞ ಪೀಠಾರೋಹಣಗೈಯ್ಯುವ ಮೂಲಕ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪರ್ಯಾಯ ಆರಂಭಿಸಿದರು.

ಪರ್ಯಾಯ ಹಿನ್ನೆಲೆ: ಪೂರ್ಣಪ್ರಜ್ಞ ಎಂಬ ಅಭಿಧಾನವುಳ್ಳ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ನಡೆಸುವ ಅಧಿಕಾರವನ್ನು ತಮ್ಮ ಎಂಟು ಮಂದಿ ಯತಿಶಿಷ್ಯರಿಗೆ ನೀಡಿದ್ದರು. ಎಂಟು ಮಠಗಳ ಈ ಪೀಠಾಧಿಪತಿಗಳ ನಡುವೆ ಶ್ರೀಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರ ಪ್ರಕ್ರಿಯೆಯೇ ಪರ್ಯಾಯ. 1522ರಲ್ಲಿ ಆರಂಭವಾದ ಪರ್ಯಾಯ ವ್ಯವಸ್ಥೆ ಪ್ರತೀ 16 ವರ್ಷಗಳಿಗೆ ಒಮ್ಮೆಯ ಚಕ್ರವನ್ನು ಹಾದು ಈಗ 32ನೇ ಚಕ್ರದಲ್ಲಿದೆ.

32ನೆಯ ಚಕ್ರದಲ್ಲಿ ಎರಡನೆಯದಾದ 250ನೇ ಅದಮಾರು ಪರ್ಯಾಯ ಮುಗಿದು ಮೂರನೆಯದಾದ 251ನೇ ಪರ್ಯಾಯ ಆರಂಭಗೊಳ್ಳುತ್ತಿದೆ. 501ನೇ ವರ್ಷಕ್ಕೆ ಪಾದಾರ್ಪಣೆಯಾಗುತ್ತಿದೆ. ಶ್ರೀ ಅದಮಾರು ಮಠದ 31ನೇ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಪೀಠದಿಂದ ನಿರ್ಗಮಿಸಿ ಶ್ರೀ ಕೃಷ್ಣಾಪುರ ಮಠದ 34ನೇ ಯತಿ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೀಠವನ್ನೇರುವ ಕ್ಷಣವನ್ನು ಉಡುಪಿ ಮತ್ತು ಹತ್ತೂರುಗಳ ಭಕ್ತರು ಕಣ್ತುಂಬಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next