Advertisement

ವಿದ್ಯಾರ್ಥಿ ವೇತನ ಪರೀಕ್ಷೆಗೆ 2500 ಮಂದಿ ಹಾಜರು

01:09 PM Feb 18, 2020 | Suhan S |

ಭಾಲ್ಕಿ: ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ವೇತನ ಪರೀಕ್ಷೆಗೆ 2500 ವಿದ್ಯಾರ್ಥಿಗಳು ಹಾಜರಾಗಿದ್ದರು.

Advertisement

ಗುರುಕುಲದ ಪರಿಸರದಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಸೇರಿದಂತೆ ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ದಾವಣಗೆರೆ, ಬಳ್ಳಾರಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಉದಗೀರ, ಲಾತೂರ, ನಾಂದೇಡ ಮತ್ತು ತೆಲಂಗಾಣದ ಸಂಗಾರೆಡ್ಡಿ, ಹೈದ್ರಾಬಾದ್‌, ಆಂಧ್ರಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಾಧ್ಯಮದ 1300 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮದ 1200 ವಿದ್ಯಾರ್ಥಿಗಳು 100 ನಿಮಿಷದ ಪ್ರಶ್ನೆ ಪತ್ರಿಕೆಯಲ್ಲಿ ಗರಿಷ್ಠ 400 ಅಂಕದ ಭೌತಶಾಸ್ತ್ರ, ಜೀವಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಸಂಬಂಧಿಸಿದ ಎಸ್‌ ಎಸ್‌ಎಲ್‌ಸಿ ಪಠ್ಯಕ್ರಮದ ಪ್ರಶ್ನೆಗಳಿಗೆ ಉತ್ತರಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿ ಪ್ರವೇಶ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಂಜೀವಕುಮಾರ ಜುಮ್ಮಾ, ಧನರಾಜ ಬಂಬುಳಗೆ ಇದ್ದರು. ಪರೀಕ್ಷೆಯಲ್ಲಿ ಮೊದಲ ಶ್ರೇಣಿಯ 11 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂ. ದ್ವಿತೀಯ ಶ್ರೇಣಿ ಪಡೆಯುವ 200 ವಿದ್ಯಾರ್ಥಿಗಳಿಗೆ ತಲಾ 51 ಸಾವಿರ ರೂ. ಮತ್ತು ತೃತೀಯ ಶ್ರೇಣಿ ಪಡೆಯುವ 500 ವಿದ್ಯಾರ್ಥಿಗಳಿಗೆ ತಲಾ 21 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next