Advertisement
ಜಿಲ್ಲಾಡಳಿತದಿಂದ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಂಡಿದ್ದ ಉಡುಪಿ ಜಿಲ್ಲೆಯ ರಜತ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಧಾರ್ಮಿಕತೆ, ಸಂಸ್ಕೃತಿ, ಸಾಮರಸ್ಯಕ್ಕೆ ಜಿಲ್ಲೆ ವಿಶೇಷ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ 25 ವರ್ಷ ಪೂರ್ಣಗೊಳಿಸಿದೆ. ಕರ್ನಾಟಕದ ಕರಾವಳಿಯಲ್ಲಿರುವ ಉಡುಪಿಯು ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಕಲೆ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರು ಪಡೆದಿದೆ. ಇಲ್ಲಿ ಸಾಮರಸ್ಯದ ವಾತಾವರಣವೂ ಇದೆ. ಪ್ರಾಕೃತಿಕವಾಗಿ ಈ ಜಿಲ್ಲೆ ಸುಂದರವಾಗಿದೆ. ಧರ್ಮ, ಸಂಸ್ಕೃತಿ, ಇತಿಹಾಸವನ್ನು ಜೀವಂತವಾಗಿಡಲು, ಸಾಮಾಜಿಕ ಸಮೃದ್ಧಿಯನ್ನು ಸ್ಥಾಪಿಸಲು ಜಿಲ್ಲೆಯಲ್ಲಿ ವಿಶೇಷ ಪ್ರಯತ್ನ ನಡೆದಿದೆ ಮತ್ತು ನಡೆಯುತ್ತಲೇ ಇದೆ. ಧರ್ಮ ಮತ್ತು ಸಂಸ್ಕೃತಿಗೆ ಸಮನ್ವಯ ಹಾಗೂ ಸಮೃದ್ಧಿಯ ದೃಷ್ಟಿಯಿಂದ ಮಧ್ವಾಚಾರ್ಯರು ಶ್ರೀಕೃಷ್ಣ ಮಠ, ಅಷ್ಟಮಠಗಳನ್ನು ಸ್ಥಾಪಿಸಿದರು. ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ, ಕೊಲ್ಲೂರು ಮೂಕಾಂಬಿಕೆ ಆಧ್ಯಾತ್ಮಿಕ ದರ್ಶನದ ಕೇಂದ್ರವಾಗಿದೆ. ಕಾರ್ಕಳದ ಭಗವಾನ್ ಬಾಹುಬಲಿ ಮೂರ್ತಿ, ಇಲ್ಲಿನ ಜನರ ಕಲೆ, ಸಂಸ್ಕೃತಿ, ತುಳುನಾಡಿನ ಸಾಂಸ್ಕೃತಿಕ ವೈಭವ, ನಾಗರಾಧನೆ, ಭೂತಕೋಲ, ಹುಲಿವೇಷ, ಮೊದಲಾದವುಗಳು ಸಮೃದ್ಧಿಯ ಸೂಚಕವಾಗಿವೆ ಎಂದರು.
ನಂಬರ್ 1 ಜಿಲ್ಲೆ ಆಗಲಿ :
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೃಷಿ, ಉದ್ಯಮ ಸಹಿತ ಎಲ್ಲ ಕ್ಷೇತ್ರದಲ್ಲೂ ಉಡುಪಿ ಸ್ವಾವಲಂಬಿಯಾಗಬೇಕು. ಅಭಿವೃದ್ಧಿಯಲ್ಲಿ ಉಡುಪಿ ನಂಬರ್ 1 ಆಗಬೇಕು. ಜಾತಿ, ಮತ, ಧರ್ಮ, ಪಕ್ಷಭೇದ ಮರೆತು ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ ಮಾತನಾಡಿ, ರಾಷ್ಟ್ರವನ್ನು ಸಂಪದ್ಭರಿತವಾಗಿಲು ಸಾಂಸ್ಕೃತಿಕ ಬುನಾದಿ ಅವಶ್ಯ. ಈ ನಿಟ್ಟಿನಲ್ಲಿ ಉಡುಪಿಗೆ ತಮ್ಮದೇ ಆದ ಹಿರಿಮೆಯಿದೆ. ದೇಶದ ಸಂವಿಧಾನದ ಕರಡು ರಚನೆಯಲ್ಲಿಯೂ ಉಡುಪಿಯ ಬಿ.ಎನ್. ರಾವ್ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಅಂಥವರ ಸೇವೆಯನ್ನು ಸದಾ ಸ್ಮರಿಸಬೇಕು. ಉಡುಪಿ ಜಿಲ್ಲೆ ಚಂದ್ರನಂತೆ ಸದಾ ಪ್ರಕಾಶಿಸುತ್ತಿರಬೇಕು ಎಂದರು.
ಶಾಸಕರ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಸ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್. ಕಲ್ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಸ್ವಾಗತಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್. ವಂದಿಸಿದರು. ಶಂಕರ್ ಪ್ರಕಾಶ್ ನಿರೂಪಿಸಿದರು.
ಸಮ್ಮಾನ:
ಜಿಲ್ಲೆಯ ಸ್ಥಾಪಕ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಸ್ಥಾಪಕ ಜಿಲ್ಲಾಧಿಕಾರಿ ಡಾ| ಕಲ್ಪನಾ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಮಾಹೆ ವಿ.ವಿ.ಯ ಪರವಾಗಿ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ನಿಟ್ಟೆ ವಿ.ವಿ.ಯ ಪರವಾಗಿ ವಿಶಾಲ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ಸಾಂಸ್ಕೃತಿಕ ವೈಭವ:
ಜಿಲ್ಲೆಯ ರಜತೋತ್ಸವದ ಹಿನ್ನೆಲೆಯಲ್ಲಿ ಮಧ್ಯಾಹ್ನ 2.30ರಿಂದ ಬೋರ್ಡ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾ ಕ್ರೀಡಾಂಗಣದ ವರೆಗೂ ಸಾವಿರಾರು ವಿದ್ಯಾರ್ಥಿಗಳು ಸಹಿತವಾಗಿ ಪುರಮೆರವಣಿಗೆ ನಡೆಯಿತು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು. ರಾತ್ರಿ 7 ಗಂಟೆಯ ಅನಂತರ ಸಂಗೀತ ಸಂಯೋಜಕ, ನಿರ್ದೇಶಕ ಅರ್ಜುನ್ ಜನ್ಯ ಜತೆಗೆ ಸರಿಗಮಪ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಂದ ಪ್ರತಿನಿಧಿಗಳು ಬಂದಿದ್ದರು.
ಭೂತ, ವರ್ತಮಾನ ತಿಳಿದಾಗ ಭವಿಷ್ಯ ಸಮೃದ್ಧ: ಹೆಗ್ಡೆ :
ಉಡುಪಿಯು ಅವಿಭಜಿತ ದ.ಕ. ಜಿಲ್ಲೆಯ ಭಾಗವಾಗಿದ್ದಾಗ ಇಲ್ಲಿನ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ದೂರದ ಮಂಗಳೂರಿಗೆ ಹೋಗಬೇಕಿತ್ತು. ಆಗ ಸರಿಯಾದ ಸಾರಿಗೆ ವ್ಯವಸ್ಥೆಯೂ ಇರಲಿಲ್ಲ. ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಇಡೀ ಅವಿ ಭ ಜಿತ ದ.ಕ. ಜಿಲ್ಲೆಯನ್ನು ಸುತ್ತಿದ್ದೆ. ಜನರ ಕಷ್ಟ ಅರಿತು ಉಡುಪಿ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಒತ್ತಾಸೆಯನ್ನು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರೊಂದಿಗೆ ಹೇಳಿಕೊಂಡಿದ್ದೆ. ಆ ಸಂದರ್ಭದಲ್ಲಿ ಭೌಗೋಳಿಕ ವ್ಯಾಪ್ತಿ ಚಿಕ್ಕದಿದೆ ಎಂಬ ವಾದವೂ ಬಂದಿತ್ತು. ಆದರೆ ಜನಸಂಖ್ಯೆ ಹೆಚ್ಚಿದೆ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ಉಡುಪಿಯನ್ನು ಪ್ರತ್ಯೇಕ ಜಿಲ್ಲೆ ಮಾಡಿಸಿಕೊಂಡೆವು. ಅದನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ವರ್ತಮಾನದ ಅಭಿವೃದ್ಧಿಯನ್ನು ಗಮನಿಸಬೇಕು. ಇದೆಲ್ಲವೂ ಇದ್ದಾಗ ಮಾತ್ರ ಸುಂದರ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಸ್ಥಾಪಕ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ ಆದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಜಿಲ್ಲೆಯ ಜನರಿಗೆ ಎಂದಿಗೂ ಸರಕಾರದ ಯಾವ ಕೆಲಸಕ್ಕೂ ನಾಳೆ ಬನ್ನಿ ಎಂಬ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದ ಸಹಕಾರವೂ ಅಗತ್ಯವಿದೆ. ಹೊಸ ಉದ್ದಿಮೆಗಳು ಜಿಲ್ಲೆಗೆ ಬರಬೇಕು. ಇಲ್ಲಿನ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸಿಗಬೇಕು. ಆಗ ತಂದೆ ತಾಯಿಯನ್ನು ನೋಡೊಕೊಳ್ಳಲು ಸಾಧ್ಯವಾಗುತ್ತದೆ. ಇನ್ನೊಂದು ಉಪವಿಭಾಗ, ಎಸಿಎಫ್ ಕಚೇರಿ ಹಾಗೂ ಆರ್‌ಟಿಒ ಕಚೇರಿಯೂ ಜಿಲ್ಲೆಗೆ ಬರಬೇಕು ಎಂದರು.