ಮುಂಬೈ: ಜುಲೈ 31 ಭಾರತದ ಇತಿಹಾಸದಲ್ಲಿ ಅಚ್ಚೊತ್ತಿದ ದಿನ. ಯಾಕೆಂದರೇ ಭಾರತದಲ್ಲಿ ಮೊದಲು ಮೊಬೈಲ್ ಕರೆ (Mobile call) ಮಾಡಿದ ದಿನ ಇದಾಗಿದೆ. 25 ವರ್ಷಗಳ ಹಿಂದೆ 1995 ಜುಲೈ 31 ರಂದು ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು, ಕೇಂದ್ರ ಸಂವಹನ ಸಚಿವರಾಗಿದ್ದ ಸುಖ್ ರಾಮ್ ಅವರಿಗೆ ಮೊದಲ ಮೊಬೈಲ್ ಕರೆ ಮಾಡಿದ್ದರು.
ಮೊದಲ ಕರೆಯನ್ನು ನೋಕಿಯಾ ಮೊಬೈಲ್ ಬಳಸಿ ಮಾಡಲಾಗಿತ್ತು. ಈ ನೆಟ್‌ವರ್ಕ್ ಮೋದಿ ಟೆಲ್‌ಸ್ಟ್ರಾ ಅವರ ಮೊಬೈಲ್ ನೆಟ್ ಸೇವೆಯಾಗಿದ್ದು, ಇದು ಭಾರತದ ಬಿ.ಕೆ. ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲ್‌ಸ್ಟ್ರಾ ನಡುವಿನ ಜಂಟಿ ಉದ್ಯಮವಾಗಿತ್ತು. ಕಲ್ಕತ್ತಾದಿಂದ ಮತ್ತು ನವದೆಹಲಿ ನಡುವೆ ಈ ಮೊಬೈಲ್ ಕರೆ ಮಾಡಲಾಗಿತ್ತು.
ಪ್ರಮುಖವಾಗಿ ಗಮಿಸುವುದಾದರೇ ಈ ಹಿಂದೆ 1 ನಿಮಿಷ ಮಾತನಾಡಲು 8.4 ರುಪಾಯಿಗಳನ್ನು ವ್ಯಯಿಸಬೇಕಾಗಿತ್ತು. ಇದು ಒಳ ಕರೆ ಮತ್ತು ಹೊರ ಕರೆಗೂ ಅನ್ವಯವಾಗಿತ್ತು. ಕೆಲವೊಮ್ಮೆ ಮೊಬೈಲ್ ಟ್ರಾಫಿಕ್ ಅವಧಿ ಹೆಚ್ಚಳವಾದಾಗ ಒಂದು ನಿಮಿಷಕ್ಕೆ 16.8 ರೂಪಾಯಿ ಪಾವತಿಸವೇಕಾದ ಅನಿವಾರ್ಯತೆ ಕೂಡ ಇತ್ತು.
ಇದೀಗ ಭಾರತದಲ್ಲಿ 448 ಮಿಲಿಯನ್ ಮೊಬೈಲ್ ಬಳಕೆದಾರರಿದ್ದಾರೆ. ಮಾತ್ರವಲ್ಲದೆ ಮೊಬೈಲ್ ಬಳಕೆದಾರರಲ್ಲೂ ಕೂಡ ಚೀನಾ ಹೊರತುಪಡಿಸಿದರೆ ಭಾರತ ಎರಡನೇ ಅತೀ ಡೊಡ್ಡ ರಾಷ್ಟ್ರ ಎನಿಸಿಕೊಂಡಿದೆ. ಪ್ರಮುಖವಾಗಿ ಭಾರತದಲ್ಲಿ ಮುಖೇಶ್ ಅಂಬಾನಿ ಒಡೆತನದ ಜಿಯೋ, ಉಚಿತ ಕರೆ ಮತ್ತು ಇಂಟರ್ನೆಟ್ ಸೇವೆ ಜಾರಿಗೆ ತಂದ ಮೊಬೈಲ್ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗಿದೆ.