ತುಮಕೂರು: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಹರಿಯಬೇಕಾಗಿರುವ 25 ಟಿಎಂಸಿ ನೀರು ಈವರೆಗೂ ಹರಿದಿಲ್ಲ, ನೀರು ಹರಿಯುವ ನಾಲೆಗೆ ಬಂಡೆಗಳನ್ನು ಹಾಕಿ ಹರಿಯುವ ನೀರಿಗೆ ತಡೆಯೊಡ್ಡಲಾಗುತ್ತಿದೆ. ಇದನ್ನು ಮನಗಂಡು ಖುದ್ದು ವೀಕ್ಷಣೆಗೆ ಬಂದಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನೀರು ತಡೆಗಟ್ಟುವ ಕೆಲಸ ನಡಿತೀದೆ: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ 25 ಟಿ.ಎಂ.ಸಿ. ನೀರು ಹರಿಸುವಂತೆ ನಿಗದಿಪಡಿಸಲಾಗಿದೆ. ಆದರೆ ಇದುವರೆವಿಗೂ 25 ಟಿ.ಎಂ.ಸಿ. ನೀರು ಹರಿದಿಲ್ಲ. ಬದಲಾಗಿ ನಾಲೆಗೆ ಬಂಡೆಗಳನ್ನು ಹಾಕಿ ಹರಿಯುವ ನೀರು ತಡೆಗಟ್ಟುವ ಕೆಲಸ ನಡೆಯುತ್ತಿದೆ. ನಾಲೆಗೆ ಬಂಡೆ ಹಾಕುವವರು ಯಾರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ ಎಂದು ಮಾರ್ಮಿಕವಾಗಿ ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಜನ ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರೂ ನಿಗದಿಯಾಗಿರುವ ನೀರು ಹರಿಸಲು ಅಡ್ಡಿಪಡಿಸುತ್ತಿರುವುದರಿಂದ ಈ ಭಾಗದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದರು.
ಸಮಸ್ಯೆ ನಿವಾರಿಸುವ ಭರವಸೆ: ಹೇಮಾವತಿ ನಾಲೆ ಆಧುನೀಕರಣಗೊಳಿಸಿ ಅಲ್ಲಿಗೆ ನಿಗದಿಪಡಿಸಿರುವ 25 ಟಿಎಂಸಿ ನೀರನ್ನು ಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದ ಅವರು, ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರಗಳು ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿವೆ. ಸರ್ಕಾರದ ಹಣ ದುರುಪಯೋಗವಾಗದೆ ಸದುಪಯೋಗವಾಗಬೇಕು ಎಂಬ ಆಶಯ ತಮ್ಮದಾಗಿದೆ. ಹೀಗಾಗಿ ಹೇಮಾವತಿ ನಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಇಲ್ಲಿರುವ ಜ್ವಲಂತ ಸಮಸ್ಯೆ ಶಾಶ್ವತವಾಗಿ ನಿವಾರಿಸಲು ಶ್ರಮಿಸುವುದಾಗಿ ತಿಳಿಸಿದರು.
Advertisement
ಭಾನುವಾರ ಬಾಗೂರು ನವಿಲೆ ಬಳಿ ಸುರಂಗ ಮಾರ್ಗದಲ್ಲಿ ನಾಲೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿಗೆ ಮಂಜೂರಾಗಿರುವ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡಿಸಿ ಮುಂದಿನ ವರ್ಷದಿಂದಲಾದರೂ ನೀರು ಹರಿಯಲು ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಸದರು ಮತ್ತು ಶಾಸಕರಿಗೆ ತಿಳಿಸಿದ್ದೇನೆ ಎಂದರು.
ಈಗಾಗಲೇ ಹೇಮಾವತಿ ನಾಲೆಯ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಇನ್ನೊಮ್ಮೆ ನಾಲಾ ವೀಕ್ಷಣೆಗೆ ಬಂದು ಅಧಿಕಾರಿಗಳೊಂದಿಗೆ ಅರ್ಧ ದಿನ ಇಲ್ಲೇ ಇದ್ದು, ಏನೇನು ಕೆಲಸ ಆಗಬೇಕು, ಏನೇನು ಆಗಿದೆ ಎಂಬ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಅನುದಾನ ಸದುಪಯೋಗವಾಗಲಿ: ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗೆ ಇನ್ನು ಹೆಚ್ಚಿನ ಹಣದ ಅಗತ್ಯವಿದ್ದರೆ ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಜನತೆ ನೀರಿಲ್ಲದೆ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದಾದರೂ ಸರ್ಕಾ ರದ ಹಣ ದುರುಪಯೋಗವಾಗದೆ ಸದುಪ ಯೋಗವಾಗಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಎಚ್ಚರಿಸಿದರು.
ನಾಲಾ ಆಧುನೀಕರಣ ಕಾಮಗಾರಿ ಕೆಲಸ ಯಾವಾಗ ಪ್ರಾರಂಭ ಮಾಡುತ್ತಾರೆ. ಎಷ್ಟೆಷ್ಟು ಹಣ ಮಂಜೂರಾಗಿದೆ. ಎಲ್ಲದರ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ ಎಂದರು.
ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಪ್ರೀತಂಗೌಡ, ಮಸಾಲೆ ಜಯರಾಮ್, ಬಿ.ಸಿ.ನಾಗೇಶ್, ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಶಾಸಕ ಬಿ.ಸುರೇಶ್‌ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಎಸ್.ಶಿವಪ್ರಸಾದ್, ಹೆಬ್ಟಾಕ ರವಿಶಂಕರ್ ಮತ್ತಿತರರಿದ್ದರು.
ಮುಖ್ಯ ಇಂಜಿನಿಯರ್ ಜೊತೆ ಚರ್ಚೆ:
ಬಾಗೂರು-ನವಿಲೆ ಸುರಂಗ ಮಾರ್ಗ ಹಾಗೂ ನಾಲೆ ಆಧುನೀಕರಣ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಮಾವತಿ ನಾಲಾ ಮುಖ್ಯ ಇಂಜಿನಿಯರ್ ಬಾಲಕೃಷ್ಣ ಜೊತೆ ಚರ್ಚಿಸಿದರು. ನಾಲಾ ಆಧುನೀಕರಣ ಕಾಮಗಾರಿ ಶೀಘ್ರ ಮುಗಿಸಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೀರು ಒದಗಿಸಬೇಕು ಎಂದು ಇಂಜಿನಿಯರ್‌ಗೆ ಸೂಚಿಸಿದರು. ಇನ್ನೊಂದು ವಾರದೊಳಗೆ ನಾಲೆ ಸ್ವಚ್ಛತೆಗೊಳಿಸುವುದಾಗಿ ಮುಖ್ಯ ಇಂಜಿನಿಯರ್ ಬಾಲಕೃಷ್ಣ ಭರವಸೆ ನೀಡಿದರು.