ಬೆಂಗಳೂರು: ಮಾಜಿ ಸಚಿವ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಸಾರ್ವಜನಿಕ ಆಸ್ತಿ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಅರ್ಜಿದಾರ ಎನ್.ಹನುಮೇಗೌಡಗೆ ಹೈಕೋರ್ಟ್ 25 ಸಾವಿರ ರೂ.ದಂಡ ವಿಧಿಸಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ರಂಗನಾಥಪುರ ನಿವಾಸಿ ಎನ್.ಹನುಮೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ನ್ಯಾ.ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಪ್ರತಿವಾದಿ ಬಿ.ಜೆ.ಪುಟ್ಟಸ್ವಾಮಿ ಅವರು ತನ್ನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದು, ಅದರಲ್ಲಿ ಶಿಕ್ಷೆಗೆ ಒಳಗಾಗಿದ್ದ ವಿಷಯವನ್ನು ಅರ್ಜಿದಾರ ಹನುಮೇಗೌಡ ಮುಚ್ಚಿಟ್ಟಿರುವ ಅಂಶ ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು, ಸತ್ಯಾಂಶ ಮರೆಮಾಚಿರುವುದು ಸರಿಯಲ್ಲ.
ಇದೊಂದು ಗಂಭೀರ ಲೋಪ ಹಾಗೂ ನ್ಯಾಯಾಲಯದ ಹಾದಿ ತಪ್ಪಿಸಿದಂತೆ. ಹೀಗಾಗಿ, ಹನುಮೇಗೌಡರಿಗೆ 25 ಸಾವಿರ ರೂ. ದಂಡ ವಿಧಿಸಿ, ಅವರನ್ನು ಅರ್ಜಿದಾರ ಸ್ಥಾನದಿಂದ ಕೈಬಿಡಲಾಗುತ್ತಿದೆ ಎಂದು ನ್ಯಾಯಪೀಠ ಆದೇಶಿಸಿತು. ಅಲ್ಲದೇ, ಈ ಅರ್ಜಿಯನ್ನು ಸ್ವಯಂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿ ಸ್ವತಃ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠ ಇದೇ ವೇಳೆ ಹೇಳಿತು.
ಪ್ರಕರಣವೇನು?: 2011ರಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಫೆ.24ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಗಾಣಿಗರ ಸಮುದಾಯಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದ್ದರು. ಆ ನಂತರ ಬಿ.ಜೆ. ಪುಟ್ಟಸ್ವಾಮಿ ಮಾ.24ರಂದು ತಮ್ಮ ಅಧ್ಯಕ್ಷತೆಯಲ್ಲಿ “ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ‘ ನೋಂದಣಿ ಮಾಡಿಸಿ ಅದಕ್ಕೆ ಹಣ ಪಡೆದಿದ್ದರು.
ಅದೇ ರೀತಿ, ದಾಸನಪುರ ಹೋಬಳಿ ಸರ್ವೇ ನಂಬರ್ 112ರಲ್ಲಿ 10 ಎಕರೆ ಗೋಮಾಳವನ್ನು ಕಡಿಮೆ ಬೆಲೆಗೆ ಟ್ರಸ್ಟ್‌ಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ನಂತರ ಟ್ರಸ್ಟ್ ಡೀಡ್ ತಿದ್ದುಪಡಿ ಮಾಡಿ ಭೂಮಿ ಲಪಟಾಯಿಸಲು ಯತ್ನಿಸಿದ್ದು ತನಿಖೆಗೆ ಆದೇಶಿಸಬೇಕು ಮತ್ತು ಭೂ ಮಂಜೂರಾತಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.