ನವದೆಹಲಿ: ದೇಶಾದ್ಯಂತ ಕೋವಿಡ್ ಸೋಂಕಿನ ಎರಡನೇ ಅಲೆ ತಾಂಡವವಾಡುತ್ತಿರುವ ನಡುವೆಯೇ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕಳೆದ 24ಗಂಟೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 25 ಮಂದಿ ಸಾವನ್ನಪ್ಪಿದ್ದು, ಸುಮಾರು 60 ಮಂದಿ ಕೋವಿಡ್ ಸೋಂಕಿತರು ಗಂಭೀರ ಸ್ಥಿತಿಯಲ್ಲಿರುವುದಾಗಿ ಶುಕ್ರವಾರ(ಏಪ್ರಿಲ್ 23) ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ
ರಾಷ್ಟ್ರರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಸಮಯದಲ್ಲಿ ಆಕ್ಸಿಜನ್ ನೀಡಲು ವಿಳಂಬವಾಗುತ್ತಿರುವುದಾಗಿ ವರದಿ ತಿಳಿಸಿದೆ. ಆಸ್ಪತ್ರೆಯಲ್ಲಿ ಕೇವಲ ಎರಡು ಗಂಟೆಗಳಿಗೆ ಸಾಕಾಗುವಷ್ಟು ಆಕ್ಸಿಜನ್ ದಾಸ್ತಾನು ಇದ್ದು, ಸುಮಾರು 60 ಮಂದಿ ರೋಗಿಗಳು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಕೊರತೆಯಿಂದಾಗಿ ಈ ಸಾವು ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ. ನಮ್ಮಲ್ಲಿ ಕೇವಲ ಎರಡು ಗಂಟೆಗಳ ಆಕ್ಸಿಜನ್ ದಾಸ್ತಾನು ಇದೆ. ವೆಂಟಿಲೇಟರ್ಸ್ ಮತ್ತು ಬಿಐಪಿಎಪಿ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಸಿಜನ್ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ತುರ್ತು ಸಂದೇಶ ರವಾನಿಸಿದ ನಂತರ ಸರ್ ಗಂಗಾರಾಮ್ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಟ್ಯಾಂಕರ್ ಆಗಮಿಸಿದೆ ಎಂದು ವರದಿ ವಿವರಿಸಿದೆ. ಆಸ್ಪತ್ರೆಯಲ್ಲಿ 500ಕ್ಕೂ ಅಧಿಕ ಕೋವಿಡ್ ರೋಗಿಗಳಿದ್ದಾರೆ. ಇದರಲ್ಲಿ 150 ಕೋವಿಡ್ ಸೋಂಕಿತರಿಗೆ ಅಧಿಕ ಹರಿವಿನ ಆಕ್ಸಿಜನ್ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.