ಬಲೂಚಿಸ್ತಾನ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಮುನ್ನ ಬುಧವಾರ(ಫೆ.07) ಚುನಾವಣಾ ಅಭ್ಯರ್ಥಿಗಳನ್ನು ಗುರಿಯಾಗಿರಿಸಿಕೊಂಡು ನಡೆಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟದಲ್ಲಿ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿರುವ ಘಟನೆ ಬಲೂಚಿಸ್ತಾನ್ ನಲ್ಲಿ ನಡೆದಿದೆ.
ಇದನ್ನೂ ಓದಿ:Twist ; SP ಗೆ ಕೈಕೊಟ್ಟು ಬಿಜೆಪಿಯೊಂದಿಗೆ ಕೈಜೋಡಿಸಲಿರುವ ಆರ್ ಎಲ್ ಡಿ?
ಪಾಕ್ ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಬಾಕಿ ಇದ್ದು, ಬಲೂಚಿಸ್ತಾನದ ಪಿಶಿನ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿ ಹೊರಭಾಗದಲ್ಲಿ ಒಂದು ಸ್ಫೋಟ ಸಂಭವಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಮುಂಬರುವ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಸ್ಫಾಂಡ್ ಯಾರ್ ಖಾನ್ ಅವರ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಸ್ಫೋಟ ನಡೆಸಲಾಗಿದೆ. ಎರಡು ಪ್ರತ್ಯೇಕ ಸ್ಫೋಟ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಗಾಯಗೊಂಡವರನ್ನು ಖಾನೋಜೈಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ.
ಚುನಾವಣೆಗೂ ಮುನ್ನ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಪಾಕಿಸ್ತಾನದ ಚುನಾವಣಾ ಆಯೋಗ ತಿಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡುವಂತೆ ಆಯೋಗ ಬಲೂಚಿಸ್ತಾನ್ ಮುಖ್ಯ ಕಾರ್ಯದರ್ಶಿ ಮತ್ತು ಐಜಿಪಿ ಅವರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದೆ.
ಚುನಾವಣಾ ಕಚೇರಿಯ ಹೊರಭಾಗದ ಪಾರ್ಕ್ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಎಂಟು ಮಂದಿ ಕಾರ್ಯಕರ್ತರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ಸ್ವತಂತ್ರ ಅಭ್ಯರ್ಥಿ ಅಸ್ಫಾಂಡ್ ಯಾರ್ ಖಾನ್ ಜಿಯೋ ನ್ಯೂಸ್ ಜತೆ ಮಾತನಾಡುತ್ತ ತಿಳಿಸಿದ್ದಾರೆ.