ಜಕಾರ್ತಾ: ಭಾರತದ ರಿಥಂ ಸಂಗವಾನ್ ಇಲ್ಲಿ ಸಾಗುತ್ತಿರುವ ಏಷ್ಯ ಒಲಿಂಪಿಕ್ ಅರ್ಹತಾ ಕೂಟದ 25ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದರಲ್ಲದೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದರು.
ಸಂಗವಾನ್ ಅವರು ಶೂಟಿಂಗ್ ಸ್ಪರ್ಧೆಯಲ್ಲಿ ಅರ್ಹತೆ ಗಳಿಸಿದ 16ನೇ ಕ್ರೀಡಾಪಟು ಆಗಿದ್ದಾರೆ. ಈ ಮೂಲಕ ಭಾರತ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ದೊಡ್ಡ ಶೂಟಿಂಗ್ ತಂಡವನ್ನು ಕಳುಹಿಸಿಕೊಡಲಿದೆ. ಟೋಕಿಯೋದಲ್ಲಿ 2020ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ 15 ಸದಸ್ಯರ ಶೂಟಿಂಗ್ ತಂಡ ಕಳುಹಿಸಿರುವುದು ಈ ಹಿಂದಿನ ದೊಡ್ಡ ಪಡೆಯಾಗಿತ್ತು.
ಭಾರತೀಯ ಶೂಟರ್‌ಗಳ ಪಾಲಿಗೆ ಜಕಾರ್ತಾ ಉತ್ತಮ ತಾಣವಾಗಿದೆ. ರಿಥಂ ಅವರು ಇಷ್ಟರವರೆಗಿನ ಸ್ಪರ್ಧೆಯ ವೇಳೆ ರಿಥಂ ಅವರಲ್ಲದೇ ಇಶಾ ಸಿಂಗ್ ಮತ್ತು ವರುಣ್ ತೋಮರ್ (ಇಬ್ಬರೂ 10 ಮೀ. ಏರ್ ಪಿಸ್ತೂಲ್) ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.
ಹರಿಯಾಣ ಮೂಲದ 20ರ ಹರೆಯದ ರಿಥಂ ಅವರು ಹ್ಯಾಂಗ್‌ಝೂ ಏಷ್ಯನ್ ಗೇಮ್ಸ್‌ನ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು. ಅವರಿಲ್ಲಿ ಇಶಾ ಮತ್ತು ಮನು ಭಾಕರ್ ಜತೆಗೂಡಿ ಸ್ಪರ್ಧಿಸಿ ಫೈನಲ್‌ನಲ್ಲಿ 28 ಹೊಡೆತವಿಕ್ಕಿ ಕಂಚಿನ ಪದಕ ಗೆದ್ದರು.
ರಿಥಂ ಕಂಚಿನ ಪದಕ ಗೆದ್ದರೂ ಪ್ಯಾರಿಸ್‌ಗೆ ಅರ್ಹತೆ ಗಳಿಸಲು ಈ ನಿರ್ವಹಣೆ ಸಾಕಾಯಿತು. ಯಾಕೆಂದರೆ ಈ ಸ್ಪರ್ಧೆಯ ಚಿನ್ನ ಮತ್ತು ಬೆಳ್ಳಿ ಗೆದ್ದ ಕೊರಿಯದ ಯಾಂಗ್ ಜಿನ್ ಮತ್ತು ಕಿಮ್ ಯೆಜಿ ಅವರು ಒಲಿಂಪಿಕ್ ಸ್ಪರ್ಧೆಗೆ ಅನರ್ಹಗೊಂಡಿದ್ದರು. ಹೀಗಾಗಿ ರಿಥಂ ಅವರಿಗೆ ಅವಕಾಶ ಲಭಿಸಿತು.
ಮೂರನೇ ಪದಕ
ಸದ್ಯ ಸಾಗುತ್ತಿರುವ ಒಲಿಂಪಿಕ್ ಅರ್ಹತಾ ಕೂಟದಲ್ಲಿ ಇದು ರಿಥಂ ಗೆದ್ದ ಮೂರನೇ ಪದಕವಾಗಿದೆ. ಅವರು ಈ ಮೊದಲು 10ಮೀ. ಏರ್ ಪಿಸ್ತೂಲ್‌ನಲ್ಲಿ ಕಂಚು ಜಯಿಸಿದ್ದರೆ ಇಶಾ ಚಿನ್ನ ಪಡೆದಿದ್ದರು. ರಿಥಂ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ತಂಡ ವಿಭಾಗದಲ್ಲಿ ಬೆಳ್ಳಿ ಪಡೆದಿದ್ದರು. ಈ ಸ್ಪರ್ಧೆಯಲ್ಲಿ ಅವರು ಅರ್ಜುನ್ ಸಿಂಗ್ ಚೀಮ ಜತೆಗೂಡಿ ಆಡಿದ್ದರು.