ಮಂಡ್ಯ: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಹೆಚ್. ಗುರು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.
ಸ್ಮಾರಕ ನಿರ್ಮಾಣಕ್ಕೆ 25 ಲಕ್ಷ ರೂ. ಹಣವನ್ನು ಕೂಡಲೇ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಹೆಚ್.ಗುರು ಮೊದಲ ವರ್ಷದ ಪುಣ್ಯಸ್ಮರಣೆ ದಿನದಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಗುರು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆದಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರೂ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದರು.
ಬೆಂಗಳೂರಿನ ಡಿಐಜಿಪಿ, ಜಿಸಿ, ಸಿಆರ್‌ಪಿಎಫ್ ಹುತಾತ್ಮ ಗುರು ನೆನಪಿಗಾಗಿ ಸ್ಮಾರಕ ನಿರ್ಮಿಸಲಿದ್ದು, ಸಮಾಧಿ ಸ್ಥಳದಲ್ಲಿ ಉದ್ಯಾನವನ, ಬೆಳಕಿನ ವ್ಯವಸ್ಥೆ ನಿರ್ಮಾಣ ಮಾಡಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧನ ಬಲಿದಾನದ ಸಂದೇಶವನ್ನು ಜನರಿಗೆ ಸಾರಿ ಹೇಳುವ ರೀತಿಯಲ್ಲಿ ಸ್ಮಾರಕ ನಿರ್ಮಾಣ ಮಾಡಲು ಉದ್ದೇಶಿಸಿದೆ. ಈ ಕಾರ್ಯಕ್ಕೆ 25 ಲಕ್ಷ ರೂ. ಅಂದಾಜು ವೆಚ್ಚದ ಯೋಜನೆ ತಯಾರಿಸಿ ಹಣ ಬಿಡುಗಡೆಗೆ ಮುಖ್ಯಮಂತ್ರಿಯವರ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದರು. ಈ ಬೆಳವಣಿಗೆಗಳ ಹಿನ್ನೆಲೆ ಯಲ್ಲಿ ಸಿಎಂ ಯಡಿಯೂರಪ್ಪ ಅವರು 25 ಲಕ್ಷ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿರುವುದು ಯೋಧರ ಕುಟುಂಬ ವರ್ಗದವರಲ್ಲಿ ಸಂತಸ ಮೂಡಿಸಿದೆ.
ಶೀಘ್ರ ಕಾರ್ಯಾರಂಭ: ಗುರು ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲು ರಾಜ್ಯಸರ್ಕಾರ 25 ಲಕ್ಷ ರೂ. ಹಣ ಬಿಡುಗಡೆ ಮಾಡಿರುವುದರಿಂದ ಕೂಡಲೇ ಸ್ಮಾರಕ ವಿನ್ಯಾಸ, ಉದ್ಯಾನವನ, ವಿದ್ಯುತ್ ದೀಪಾಲಂಕಾರ, ಕಲ್ಲು ಬೆಂಚುಗಳ ಅಳವಡಿಕೆ ಸೇರಿದಂತೆ ಇನ್ನಿತರ ಕಾಮಗಾರಿಗಳ ಸಂಬಂಧ ಅಂದಾಜು ವೆಚ್ಚ, ಯೋಜನಾ ನಕ್ಷೆ ತಯಾರಿಸಿ ಕಾಮಗಾರಿ ಆರಂಭಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಉದಯವಾಣಿಗೆ ತಿಳಿಸಿದರು.
ಸರ್ಕಾರ 25 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು, ಹಣಕಾಸಿನ ಕೊರತೆ ಎದುರಾದಲ್ಲಿ ದಾನಿಗಳಿಂದ ಸಂಗ್ರಹಿಸಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಗುರು ಇರುವ ಸ್ಮಾರಕ ಸ್ಥಳ ಒಂದು ಎಕರೆ ಪ್ರದೇಶದಲ್ಲಿದೆ. ಅದನ್ನು ಸ್ಮಾರಕ ಸ್ಥಳವಾಗಿ ಮಾತ್ರವಲ್ಲದೆ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸ್ಮಾರಕ ಸ್ಥಳ ಕೊರಟ ಗೆರೆ ಕೊಳ್ಳೇಗಾಲ ರಾಜ್ಯ ಹೆದ್ದಾರಿ ಯಲ್ಲಿರುವುದರಿಂದ ಹೆಚ್ಚಿನ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಲಿದೆ ಎಂದು ಹೇಳಿದರು