ರಾಯಚೂರು: ಕರ್ನಾಟಕ ಸಂಘದ ಆವರಣದಲ್ಲಿ ಬಯಲು ರಂಗ ಮಂದಿರ, ಉದ್ಯಾನವನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಡಾ| ಶಿವರಾಜ್ ಪಾಟೀಲ್ ಭರವಸೆ ನೀಡಿದರು.
ಬಿಆರ್‌ಜಿಎಫ್ ಯೋಜನೆಯಡಿ ನಿರ್ಮಿಸಿದ ಕರ್ನಾಟಕ ಸಂಘ ಸಾಂಸ್ಕೃತಿಕ ಭವನದ ಅಪೂರ್ಣ ಕಟ್ಟಡ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದರು.
ಸಾಂಸ್ಕೃತಿಕ ಭವನದ ಬಾಕಿ ಕೆಲಸಗಳನ್ನು ಮುಗಿಸಲು ತಮ್ಮ ಅನುದಾನ ನಿಧಿಯಿಂದ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಅಲ್ಲದೇ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯಿಂದ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ನೆರವನ್ನು ನೀಡುವಂತೆ ಉಭಯ ಸಂಸ್ಥೆಗಳ ಅಧ್ಯಕ್ಷರಿಗೆ ಸೂಚಿಸಿದರು.
ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ. ಇನ್ನೂ ಆರು ವರ್ಷಗಳಲ್ಲಿ ಸಂಘವು ಶತಮಾನ ಪೂರೈಸಲಿದೆ. ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಕನ್ನಡದ ಕೈಂಕರ್ಯವನ್ನು ಮಾಡುತ್ತ ಬಂದಿದೆ ಎಂದರು.
ಆರ್‌ಡಿಎ ತಿಮ್ಮಪ್ಪ ನಾಡಗೌಡ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳ ಆಂಜನೇಯ, ನಗರಸಭೆ ಸದಸ್ಯ ಶಶಿರಾಜ್, ಕರ್ನಾಟಕ ಸಂಘದ ಉಪಾಧ್ಯಕ್ಷ ಅರವಿಂದ ಕುಲಕರ್ಣಿ, ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಮುರಳೀಧರ ಕುಲಕರ್ಣಿ, ಖಜಾಂಚಿ ಜಿ.ಹನುಮಂತಪ್ಪ, ಕೆ.ಕರಿಯಪ್ಪ ಮಾಸ್ಟರ್, ಕೆ.ಗಿರಿಧರ, ರವೀಂದ್ರ ಜಲ್ದಾರ್, ತೇಜಪ್ಪ, ಸತ್ಯಣ್ಣ, ಅಸ್ಲಂ ಪಾಷಾ ಸೇರಿ ಅನೇಕರಿದ್ದರು.