Advertisement

ಪ್ರತಿ ವಾರ್ಡ್‌ಗೆ 25 ಲಕ್ಷ ರೂ. ನೆರವು

11:06 AM Apr 10, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿ ವಾರ್ಡ್‌ನ ಐದು ಸಾವಿರ ಕುಟುಂಬಗಳಿಗೆ ಉಚಿತವಾಗಿ ಆಹಾರ ಸಾಮಗ್ರಿ ಮತ್ತು ಔಷಧಿ ನೀಡಲಾಗುವುದು ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ತಿಳಿಸಿದರು.

Advertisement

ಕೋವಿಡ್ 19 ವೈರಸ್‌ಗೆ ಸಂಬಂಧಪಟ್ಟಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಮೇಯರ್‌ ನೇತೃತ್ವದಲ್ಲಿ ಸರ್ವಪಕ್ಷ ಸದಸ್ಯರ ಸಭೆ ನಡೆಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಗೌತಮ್‌ ಕುಮಾರ್‌, ಎಲ್ಲ ವಾರ್ಡ್‌ಗಳ ಯೋಜಿತ ಕಾಮಗಾರಿಗಳಿಗೆ ನೀಡುವ ಅನುದಾನದ 2 ಕೋಟಿ ರೂ. ಗಳಲ್ಲಿ ಪ್ರತ್ಯೇಕವಾಗಿ 25 ಲಕ್ಷ ರೂ. ರೂ. ಅನುದಾನವನ್ನು ಮೀಸಲಿಡಲಾಗಿದೆ. ಅದರಲ್ಲಿ ಪ್ರತಿ ವಾರ್ಡ್‌ನಲ್ಲೂ ಅಂದಾಜು 5 ಸಾವಿರ ಆಹಾರ ಧಾನ್ಯಗಳ ಕಿಟ್‌ ಹಾಗೂ ಔಷಧಿ ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ವಾರ್ಡ್‌ ಕಮಿಟಿಗಳಿಂದಲೇ ಸ್ಥಳೀಯ ಫ‌ಲಾನುಭವಿಗಳ ಆಯ್ಕೆ ಮಾಡಲಾಗುವುದು. ಸಮಿತಿಯಿಂದಲೇ ಅಗತ್ಯವಿರುವರನ್ನು ಗುರುತಿಸಲಾಗುವುದು ಎಂದು ತಿಳಿಸಿದರು. ಉಪ ಮೇಯರ್‌ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾ ನಾರಾಯಣ್‌, ಮಾಜಿ ಮೇಯರ್‌ ಗಳು, ಮತ್ತಿತರರು ಹಾಜರಿದ್ದರು.

ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಣೆ : ವಲಯವಾರು ಈವರೆಗೆ 885 ಸ್ಥಳಗಳಲ್ಲಿ 72,326 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದೆ. ಏ.8 (ಬುಧವಾರ)ವರೆಗೆ 41,527 ಕಿಟ್‌ಗಳನ್ನು ವಿತರಿಸಿದ್ದು, ಏ.9 (ಗುರುವಾರ) 25,208 ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಬಿಬಿಎಂಪಿಯಿಂದ ಯಾವುದೇ ಸಭೆ ನಡೆಸದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಪಾಲಿಕೆಯ ಎಲ್ಲ ಸದಸ್ಯರಿಗೆ ಮಾಹಿತಿ ನೀಡುವಂತೆ ಮೇಯರ್‌ ಗೌತಮ್‌ ಕುಮಾರ್‌, ಆಯುಕ್ತರಿಗೆ ಸೂಚನೆ ನೀಡಿದರು. ಅಲ್ಲದೆ, ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‌ ಮಂಡನೆಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next