ಕಲಬುರಗಿ: ಇತ್ತೀಚಿಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಿರುವುದರ ಹಿಂದಿನ ಅಜೆಂಡಾ ಏನು? ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಹತ್ಯೆಯಾದ ಯುವಕನ ವಿರುದ್ಧ ಹಲವಾರು ಗಂಭೀರ ಕೇಸುಗಳಿದ್ದವು. 2020ರಲ್ಲಿ ಬಿಜೆಪಿ ಸರ್ಕಾರವೇ ಆತನನ್ನು ಜೈಲಿಗಟ್ಟಿತ್ತು. ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರೇ ಇದೊಂದು ವೈಯಕ್ತಿಕ ಕಾರಣಗಳಿಂದಾಗಿ ನಡೆದ ಕೊಲೆ ಎಂದಿರುವಾಗಲೂ ಪರಿಹಾರ ಹಣ ನೀಡಿದ್ದು ಯಾಕೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ಹಣ ನೀಡಲಾಗಿದೆ? ಹೀಗೆ ವೈಯಕ್ತಿಕ ದ್ವೇಷಕ್ಕೆ ಮೃತಪಟ್ಟವರಿಗೆ ಇದೇ ರೀತಿ ಸರ್ಕಾರ ಪರಿಹಾರ ನೀಡುತ್ತದೆಯೇ ? ಎಂದು ಪ್ರಶ್ನೆಗಳ ಸುರಿಮಳೆ ಮಾಡಿದ್ದಾರೆ.
ನೆರೆ ಸಂತ್ರಸ್ತರಿಗೆ, ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ನೀಡಲು ಸತಾಯಿಸುವ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ಹೇಗೆ 25 ಲಕ್ಷ ರೂ. ನೀಡಿದೆ ಎಂದು ಅಚ್ಚರಿ ಪಟ್ಟಿದ್ದಾರೆ. ಪರಿಹಾರ ನೀಡುವಲ್ಲಿ ಸರ್ಕಾರದ ತಾರತಮ್ಯ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಪ್ರಿಯಾಂಕ್, ಹೀಗೆ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ಏಕೆ ನೀಡಿಲ್ಲ? ಕೊಡಗಿನ ಯೋಧನ ಕುಟುಂಬಕ್ಕೆ ಏಕಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಅನಾರೋಗ್ಯ ಪೀಡಿತರಿಗೆ, ಬಡವರ ನೆರವಿಗೆ, ಯೋಧರ ಕುಟುಂಬಗಳಿಗೆ ಬಳಸಬಹುದಾದ “ವಿವೇಚನೆ ‘ಯನ್ನು ತಮ್ಮ ಪಕ್ಷದ ಕೆಡರ್ ಒಬ್ಬನಿಗೆ ಬಳಸಿದ್ದು ಸಿಎಂ ಯೋಚನೆ, ವಿವೇಚನೆ ಎಂತದ್ದು ಎಂದು ತಿಳಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಮೂಲಕ 25 ಲಕ್ಷ ರೂ.ಗಳಲ್ಲ 25 ಕೋಟಿ ರೂ.ಗಳನ್ನಾದರೂ ಕೊಡಲಿ, ಆದರೆ ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು? ದೇಶದ ಗಡಿ ಕಾಯುತ್ತ ವೀರಮರಣವನ್ನಪ್ಪಿದ ಯೋಧ ಅಲ್ತಾಫ್ ಕುಟುಂಬಕ್ಕೆ ಸರ್ಕಾರ ಎಷ್ಟು ಪರಿಹಾರ ನೀಡಿದೆ? ದೇಶಭಕ್ತಿಯ ವ್ಯಾಖ್ಯಾನವನ್ನು ಬಿಜೆಪಿ ಸರ್ಕಾರ ಬದಲಿಸಿದೆಯೇ? ಎಂದು ಪಶ್ನಿಸಿದ್ದಾರೆ.