ಕೀವ್: ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಿಂದ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 25 ಮಂದಿ ಮೃತಪಟ್ಟ ಘಟನೆ ಶುಕ್ರವಾರ( ಎ.28 ರಂದು) ನಸುಕಿನ ವೇಳೆ ನಡೆದಿದೆ. ಈ ದಾಳಿ ರಷ್ಯಾ ಎರಡು ತಿಂಗಳ ಬಳಿಕ ನಡೆದ ಭೀಕರ ಕ್ಷಿಪಣಿ ದಾಳಿಯಾಗಿದೆ.
ರಷ್ಯಾದ ನೌಕಾ ಕ್ಷಿಪಣಿಗಳು ಕೇಂದ್ರ ಉಕ್ರೇನಿಯನ್ ನಗರಗಳಾದ ಉಮಾನ್ ಮತ್ತು ಡ್ನಿಪ್ರೊದಲ್ಲಿ ದಾಳಿ ನಡೆಸಿದ್ದು, ಕ್ಷಿಪಣಿಗಳು ಉಮಾನ್ ಕೇಂದ್ರ ಪ್ರದೇಶದಲ್ಲಿರುವ ವಸತಿ ಸಮುಚ್ಛಯದ ಮೇಲೆ ಬಡಿದ ಪರಿಣಾಮ 4 ಮಕ್ಕಳು ಸೇರಿದಂತೆ 25 ನಾಗರಿಕರು ಮೃತಪಟ್ಟಿದ್ದಾರೆ.
ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದೆ. ವಸತಿ ಕಟ್ಟಡದಲ್ಲಿದ್ದ ನಾಗರಿಕರು ಮೃತಪಟ್ಟಿದ್ದಾರೆ.ಅಂದಾಜು 109 ಜನರು ಕಟ್ಟಡದಲ್ಲಿ ವಾಸಿಸುತ್ತಿದ್ದರು. 27 ಫ್ಲಾಟ್ ಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಒಂಬತ್ತನೇ ಮಹಡಿಯಲ್ಲಿ ವಯಸ್ಸಾದ ಮಹಿಳೆ, ಅವರ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ವಾಸಿಸುತ್ತಿದ್ದರು, ಒಬ್ಬ ವ್ಯಕ್ತಿ ತನ್ನ ಮಗನೊಂದಿಗೆ ಎಂಟನೇ ಮಹಡಿಯಲ್ಲಿ ವಾಸಿಸುತ್ತಿದ್ದರು,ಒಬ್ಬ ಮಹಿಳೆ ತನ್ನ ಮಗಳೊಂದಿಗೆ ಏಳನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಇವರೆಲ್ಲ ಮೃತಪಟ್ಟಿದ್ದಾರೆ. ಯುವ ಕುಟುಂಬವೊಂದು ಆರನೇ ಮಹಡಿಯಲ್ಲಿ ವಾಸಿಸುತ್ತಿತ್ತು, ಅವರ ಮಗ ಅದೃಷ್ಟಶಾಲಿ ಅವನು ಜೀವಂತವಾಗಿದ್ದಾನೆ ಎಂದು ಅಧಿಕಾರಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಗ್ನೇಯ ನಗರವಾದ ಡ್ನಿಪ್ರೊದಲ್ಲಿ, ಕ್ಷಿಪಣಿಯು ಎರಡು ವರ್ಷದ ಮಗು ಮತ್ತು 31 ವರ್ಷದ ಮಹಿಳೆಯನ್ನು ಕೊಂದಿದೆ ಎಂದು ಪ್ರಾದೇಶಿಕ ಗವರ್ನರ್ ಸೆರ್ಹಿ ಲೈಸಾಕ್ ಹೇಳಿದ್ದಾರೆ.
ಮಾರ್ಚ್ ಬಳಿಕ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದ್ದು, ಇದು ದೊಡ್ಡಮಟ್ಟದ ಕ್ಷಿಪಣಿ ದಾಳಿಯಾಗಿದೆ.
ರಾಜಧಾನಿ ಕೌ ಮೇಲೂ ದಾಳಿ ನಡೆಸಲಾಗಿದ್ದು, ಅಲ್ಲಿನ ಹೆಚ್ಚೇನು ಅಪಾಯ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ.