ಬೆಂಗಳೂರು: ಬಿಜೆಪಿಯ 25 ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿಯವರ ಎದುರು ಮಾತನಾಡುವ ಧೈರ್ಯವೇ ಇಲ್ಲ. ತಿರುಪತಿಗೆ ಹೋಗಿ ವೆಂಕಟೇಶ್ವರ ಸ್ವಾಮಿಗೆ ನಮಸ್ಕಾರ ಹಾಕುವ ರೀತಿ ರಾಜ್ಯದ ಸಂಸದರು ಮೋದಿಯವರಿಗೆ ನಮಸ್ಕಾರ ಹಾಕಿ ಬರುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಗ್ಧಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಹಾಗೂ ನಾಯಕರಿಗೆ ಪ್ರಧಾನಿ ಮೋದಿಯವರ ಮುಂದೆ ನಿಂತು ಮಾತನಾಡುವ ಧಮ್ಮು, ತಾಕತ್ತು ಇಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆ ಧೈರ್ಯವಿತ್ತು. ಆದರೆ ಅವರನ್ನು ಈಗಾಗಲೇ ಮನೆಗೆ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಪುಕ್ಕಟೆಯಾಗಿ ಕೊಡುತ್ತಿಲ್ಲ. ರಾಜ್ಯದಿಂದ ವಾರ್ಷಿಕ 4 ಲಕ್ಷದ 70 ಸಾವಿರ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. ನಮಗೆ 37 ಸಾವಿರ ಕೋಟಿ ಮಾತ್ರ ಜಿಎಸ್ಟಿ ಪರಿಹಾರ ಲಭಿಸುತ್ತಿದೆ. ಬಿಜೆಪಿಯವರ ಪೌರುಷ ಉತ್ತರಕುಮಾರನಂತೆ ಎಂದು ವ್ಯಂಗ್ಯವಾಡಿದರು.
ಮಹಿಳೆಯರಿಗಾಗಿ ಪ್ರಾರಂಭಿಸಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆ 5 ವರ್ಷವಿರುತ್ತದೆ. ಈಗಾಗಲೇ 3 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಒಮ್ಮೆಲೇ ಎಲ್ಲರೂ ಹೋಗುವುದು ಬೇಡ. ಯಾತ್ರಾ ಸ್ಥಳಕ್ಕೆ, ದೇವಾಲಯಕ್ಕೆ ಎಲ್ಲರೂ ಹೋದರೆ ಒತ್ತಡ ಉಂಟಾಗುತ್ತದೆ. ಮತ್ತೊಮ್ಮೆ ನಮ್ಮ ಸರ್ಕಾರವೇ ಬರಲಿದ್ದು, ಈ ಯೋಜನೆ 10 ವರ್ಷ ಇರುತ್ತದೆ. ಬಿಜೆಪಿಯವರು ದಾರಿ ತಪ್ಪಿಸುತ್ತಾರೆ. ಅದಕ್ಕೆ ಕಿವಿಗೊಡಬೇಡಿ. ಬಸ್ಸುಗಳನ್ನು ಕಡಿಮೆ ಮಾಡಿಲ್ಲ. ಆದರೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿವರಿಸಿದರು.
ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಬಾರದು
ಮುಖ್ಯಮಂತ್ರಿ ವಿಚಾರ ನಮ್ಮ ಆಂತರಿಕ ವಲಯಕ್ಕೆ ಸೀಮಿತವಾಗಿದ್ದು ಅದರ ಬಗ್ಗೆ ಬಿಜೆಪಿಯವರು ತಲೆ ಕೆಡಿಸಿಕೊಳ್ಳುವುದು ಬೇಡ. ಸಿದ್ದರಾಮಯ್ಯ ಎಷ್ಟು ವರ್ಷ ಮುಂದುವರಿಯುತ್ತಾರೆ ಎಂಬುದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಅದು ನಮಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಬಾರದು ಎಂದು ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.
ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಅಧಿಕಾರಾವಧಿ ಬಗ್ಗೆ ಮಾತನಾಡಬಾರದು. ನಾಲ್ಕು ಗೋಡೆಯ ನಡುವೆ ನಡೆಯುವ ವಿಚಾರ ಇದು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜೂ.26 ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.