Advertisement

25.90 ಲಕ್ಷ ರೂ. ಮೌಲ್ಯದ ಚಿನ್ನ -ಬೆಳ್ಳಿ ಆಭರಣ ಜಪ್ತಿ

11:35 AM Feb 05, 2022 | Team Udayavani |

ಕಲಬುರಗಿ: ಕಳೆದ ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತನ್ನ ಕೈಚಳಕ ತೋರಿಸುತ್ತಿದ್ದ ಖದೀಮ ಸೇರಿದಂತೆ ಮೂವರು ಆರೋಪಿತರು ಬಲೆಗೆ ಬಿದ್ದಿದ್ದು, ಬಂಧಿತರಿಂದ ಚಿನ್ನಾಭರಣ, ಬೆಳ್ಳಿ ಆಬರಣ, ನಗದು ಸೇರಿ ಬರೋಬ್ಬರಿ 25.90 ಲಕ್ಷ ರೂ. ಮೌಲ್ಯದ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಪ್ರಮುಖ ಆರೋಪಿ ಮಂಗಲಗಿ ಗ್ರಾಮದ ಚಂದ್ರಕಾಂತ ಅಲಿಯಾಸ್‌ ಚಂದ್ರ್ಯಾ ಅಲಿಯಾಸ್‌ ತಲವಾರ ವಿಜ್ಯಾ, ಈತನ ಸಹಚಾರರಾದ ಜಾಮಖೇಡ್‌ನ‌ ಪಸರ ಕಾಳೆ ಹಾಗೂ ಚೋಟಾರೋಜಾ ನಿವಾಸಿ ರಾಘವೇಂದ್ರ ತೆಂಗಳಿ ಎಂಬುವವರೇ ಬಂಧಿತ ಆರೋಪಿತರು.

ಇವರಿಂದ 20.40 ಲಕ್ಷ ರೂ. ಮೌಲ್ಯದ 407.87 ಗ್ರಾಂ ಚಿನ್ನಾಭರಣ, ದೇವರ ಮೂರ್ತಿ ಸೇರಿ 5 ಲಕ್ಷ ರೂ. ಮೌಲ್ಯದ ಏಳು ಕೆಜಿ ಬೆಳ್ಳಿ ಆಭರಣ ಹಾಗೂ 50 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2012ರಲ್ಲಿ ಚಂದ್ರಕಾಂತ ಕಳ್ಳತನ ಪ್ರಕರಣವೊಂದಲ್ಲಿ ಭಾಗಿಯಾಗಿದ್ದ. ಆದರೆ, ಅಂದಿನಿಂದ ಈತನ ಸುಳಿವು ಸಿಗದ ಕಾರಣ ಪೊಲೀಸರು ನಿರಂತರವಾಗಿ ಆರೋಪಿತನನ್ನು ಹುಡುಕುವಂತೆ ಆಗಿತ್ತು. ಇದೀಗ ಪ್ರೊಬೇಷನರಿ ಡಿಎಸ್‌ಪಿ ವೀರಯ್ಯ ಹಿರೇಮಠ ಮತ್ತು ಗ್ರಾಮೀಣ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ ತನಿಖಾ ತಂಡ ಪ್ರಮುಖ ಆರೋಪಿತ ಮತ್ತು ಆತನ ಇಬ್ಬರ ಸಹಚರರನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಹೇಳಿದರು.

ಅಂದಿನಿಂದ ಸೇಡಂ, ಕಮಲಾಪುರ, ಯಡ್ರಾಮಿ ಸೇರಿದಂತೆ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 12 ಪ್ರಕರಣಗಳು ಮತ್ತು ಬೀದರ್‌ ಜಿಲ್ಲೆಯ ಚಿಟುಗುಪ್ಪ ಪೊಲೀಸ್‌ ಠಾಣೆಯ ಒಂದು ಪ್ರಕರಣ ಸೇರಿ ಒಟ್ಟಾರೆ 13 ಕಳ್ಳತನ ಪ್ರಕರಣಗಳಲ್ಲಿ ಚಂದ್ರಕಾಂತ ದೋಚಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ತನಿಖೆ ವೇಳೆಯಲ್ಲಿ ಜೋಡಿ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ ಎಂದೂ ಬಯಲಿಗೆ ಬಂದಿದೆ ಎಂದರು.

Advertisement

ತಂಡದ ಬಗ್ಗೆ ಮೆಚ್ಚುಗೆ

ಖತರ್ನಾಕ್‌ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ತಂಡಕ್ಕೆ ಎಸ್‌ಪಿ ಇಶಾ ಪಂತ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೊಬೇಷನರಿ ಡಿಎಸ್‌ಪಿ ವೀರಯ್ಯ ಹಿರೇಮಠ ಮತ್ತು ಗ್ರಾಮೀಣ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ, ಪಿಎಸ್‌ಐಗಳಾದ ವನಂಜಿಕರ ಮತ್ತು ಚೇತನ ಹಾಗೂ ಸಿಬ್ಬಂದಿಯಾದ ನಾಗೇಂದ್ರ, ಜಗನ್ನಾಥ, ಶಿವರಾಜ, ಬಲರಾಜ, ಓಂಕಾರ ರೆಡ್ಡಿ, ಅಂಬ್ರೇಶ ಬಿರಾದಾರ, ಬಸವರಾಜ ಅವರ ಕಾರ್ಯವನ್ನು ಅವರು ಶ್ಲಾಷಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಪ್ರೊಬೇಷನರಿ ಡಿಎಸ್‌ಪಿ ವೀರಯ್ಯ ಹಿರೇಮಠ, ಸಿಪಿಐ ಶ್ರೀಮಂತ ಇಲ್ಲಾಳ ಹಾಗೂ ಸಿಬ್ಬಂದಿ ಇದ್ದರು.

ಕೈಗೆ ಸಿಗದ ಚಾಲಾಕಿ

ಪ್ರಮುಖ ಆರೋಪಿ ಚಂದ್ರಕಾಂತ ಅತ್ಯಂತ ಚಾಲಾಕಿತದಿಂದ ಕಳ್ಳತನ ಪ್ರಕರಣಗಳನ್ನು ನಡೆಸುತ್ತಿದ್ದ ಮತ್ತು ಅಷ್ಟೇ ಚಾಲಾಕಿತನದಿಂದ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಳ್ಳುತ್ತಿದ್ದ. ಈತ ಹೆಚ್ಚಾಗಿ ಮೊಬೈಲ್‌ ಬಳಕೆ ಮಾಡುತ್ತಿರಲಿಲ್ಲ. ಒಂದು ವೇಳೆ ಮೊಬೈಲ್‌ ಬಳಸಿದರೂ, ಹೆಚ್ಚು ಹೊತ್ತು ಬಳಕೆ ಮಾಡುತ್ತಿರಲಿಲ್ಲ. ಅಲ್ಲದೇ, ಮೇಲಿಂದ ಮೇಲೆ ಸಿಮ್‌ಗಳನ್ನು ಬದಲಾವಣೆ ಮಾಡುತ್ತಲೇ ಇದ್ದ. ಒಂದೇ ಸ್ಥಳದಲ್ಲಿ ಇರುತ್ತಿರಲಿಲ್ಲ. ಹೀಗಾಗಿ ಇವನು ಪೊಲೀಸರಿಗೆ ಸಿಗುತ್ತಿರಲಿಲ್ಲ ಎಂದು ಎಸ್‌ಪಿ ವಿವರಿಸಿದರು.

ಜೋಡಿ ಕೊಲೆ ಆರೋಪಿ

2018ರಲ್ಲಿ ಸುಲೇಪೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ನಿಡುಗುಂದಾದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಈ ಚಂದ್ರಕಾಂತ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯಾವುದೋ ಕಲಹದಿಂದಾಗಿ ತನ್ನ ಪತ್ನಿಯ ಸಂಬಂಧಿಕರಾಗಿದ್ದ ಇಬ್ಬರನ್ನು ಕೊಲೆ ಮಾಡಿದ್ದ ಎಂದು ಇಶಾ ಪಂತ್‌ ತಿಳಿಸಿದರು. ಕಮಲಾಪುರ ತಾಲೂಕಿನಲ್ಲಿ ಸಂಗಮೇಶ್ವರ ದೇವರ ಬೆಳ್ಳಿ ಮೂರ್ತಿಯ ಪ್ರಕರಣದಲ್ಲೂ ಈತ ಬೇಕಾಗಿದ್ದ. ದೇವಸ್ಥಾನದೊಂದಿಗೆ ಪಕ್ಕದಲ್ಲಿದ್ದ ಪೂಜಾರಿ ಮನೆಯಲ್ಲೂ ಚಿನ್ನಾಭರಣ ಕಳ್ಳತನ ಮಾಡಿದ್ದ. ಯಾವಾಗಲೂ ಈತ ಆಯುಧವನ್ನು ಜತೆಯಲ್ಲೇ ಇಟ್ಟುಕೊಂಡು ಸುತ್ತಾಡುತ್ತಿದ್ದ. ಆ ಆಯುಧಗಳು ಮತ್ತು ಜಿಂಕೆ ಕೋಡುಗಳನ್ನು ಆರೋಪಿತನಿಂದ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next