Advertisement

4 ವರ್ಷದಲ್ಲಿ 243 ರೈತರ ಆತ್ಮಹತ್ಯೆ

12:59 PM Jun 26, 2019 | Suhan S |

ಮಂಡ್ಯ: ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 243 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದಿಗೂ ರೈತರ ಆತ್ಮಹತ್ಯೆ ನಿಂತಿಲ್ಲ. ಸಾವಿಗೆ ಶರಣಾಗುವ ಅನ್ನದಾತರಿಗೆ 5 ಲಕ್ಷ ರೂ. ಪರಿ ಹಾರ ನೀಡಿ ಕೈ ತೊಳೆದುಕೊಳ್ಳುತ್ತಿರುವ ಸರ್ಕಾರ, ರೈತರ ಬದುಕಿನ ರಕ್ಷಣೆಗೆ ಶಾಶ್ವತ ಪರಿಹಾರ ರೂಪಿಸಲು ಮಾತ್ರ ಮುಂದಾಗುತ್ತಿಲ್ಲ.

Advertisement

ರೈತರ ಆತ್ಮಹತ್ಯೆ ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿದ ಸಾಲ ಮನ್ನಾ ಘೋಷಣೆ ಅವ್ಯವಸ್ಥೆಯ ಗೂಡಾಗಿದೆ. ಹಣಕಾಸಿನ ಕೊರತೆಯಿಂದ ಸಾಲ ಮನ್ನಾ ಚಿತ್ರಣ ಅಸ್ಪಷ್ಟವಾಗಿಯೇ ಉಳಿದಿದೆ. ಸರ್ಕಾರ ರೈತರನ್ನು ತೃಪ್ತಿಪಡಿಸಲು ಋಣಮುಕ್ತ ಪ್ರಮಾಣಪತ್ರ ನೀಡಿದರೂ ಬ್ಯಾಂಕುಗಳು ಅದಕ್ಕೆ ಕಿಲುಬುಕಾಸಿನ ಬೆಲೆ ಕೊಡುತ್ತಿಲ್ಲ. ಸಾಲ ತೀರುವಳಿಗೆ ನೋಟೀಸ್‌ಗಳು ರೈತರ ಮನೆಗೆ ಅಡಿ ಇಡುತ್ತಲೇ ಇವೆ. ಸಾಲದ ನೋಟೀಸ್‌ಗೆ ಹೆದರಿ ಎಷ್ಟೋ ರೈತರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈಗಲೂ ರೈತರ ಸರಣಿ ಆತ್ಮಹತ್ಯೆ ಜಿಲ್ಲೆಯೊಳಗೆ ಮುಂದುವರಿದೇ ಇದೆ.

ಒಂದೆಡೆ ಬ್ಯಾಂಕ್‌ಗಳು ಜಾರಿಗೊಳಿಸುವ ಸಾಲದ ನೋಟೀಸ್‌ಗೆ ಹೆದರಬೇಡಿ ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದರೆ, ಬ್ಯಾಂಕುಗಳು ಸಾಲ ತೀರಿಸದ ರೈತರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸುತ್ತಿವೆ. ಬ್ಯಾಂಕ್‌ಗಳು ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸುತ್ತಿರುವುದರಿಂದ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಸಹಕಾರ ಬ್ಯಾಂಕುಗಳಲ್ಲಿನ 513 ಕೋಟಿ ರೂ. ರೈತರ ಸಾಲದ ಹಣದಲ್ಲಿ 331.01 ಕೋಟಿ ರೂ. ಸಾಲ ಮನ್ನಾ ಆಗಿದೆ. ಜಿಲ್ಲೆಯ ರೈತರ ಒಟ್ಟು ಸಾಲ ಪೂರ್ಣ ಪ್ರಮಾಣದಲ್ಲಿ ತೀರುವಳಿಯಾಗಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದ ಹಣವೂ ಬಾಕಿ ಇದೆ. ಸರ್ಕಾರದ ಸಂಪೂರ್ಣ ಸಾಲ ಮನ್ನಾ ಘೋಷಣೆಯಾಗಷ್ಟೇ ಉಳಿದುಕೊಂಡಿದೆ. ರೈತರ ಆತ್ಮಹತ್ಯೆ ಮಾತ್ರ ಮುಂದುವರೆದಿದೆ. ಬ್ಯಾಂಕ್‌ ಸಾಲಕ್ಕಿಂತ ಖಾಸಗಿ ಸಾಲಕ್ಕೆ ಹೆದರಿ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಖಾಸಗಿ ಸಾಲಕ್ಕೆ ಕಡಿವಾಣ ಹಾಕಲು ಕೇರಳ ಮಾದರಿಯ ಕಾನೂನು ಜಾರಿಗೆ ತರುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕೂ ಮೊದಲು ರೈತರಿಗೆ ಸಕಾಲದಲ್ಲಿ ನೀರು ದೊರಕುವಂತೆ ಕೆರೆ-ಕಟ್ಟೆಗಳ ಪುನಶ್ಚೇತನ, ಅಂತರ್ಜಲ ವೃದ್ಧಿ, ಮಳೆ ನೀರು ಸಂಗ್ರಹ ಹೆಚ್ಚಳ ಮಾಡುವ ಕಾರ್ಯಕ್ರಮಗಳಿಗೆ ಪ್ರಾಮು ಖ್ಯತೆಯನ್ನೇ ಕೊಡುತ್ತಿಲ್ಲ. ಕೆರೆಯಿಂದ ಕೆರೆಗೆ ನೀರು ಹರಿಸುವ ಯೋಜನೆ ಘೋಷಣೆ ಮಾಡಿ ವರ್ಷವಾದರೂ ಅದಕ್ಕೆ ಇಂದಿಗೂ ಚಾಲನೆ ಸಿಕ್ಕಿಲ್ಲ.

ಜಿಲ್ಲೆಯಲ್ಲಿ 686 ಕೆರೆಗಳಿದ್ದರೂ ಅವುಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ, ಒತ್ತುವರಿ ತೆರವುಗೊಳಿಸುವ, ಹೂಳು ತೆಗೆಸಿ ನೀರಿನ ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವ ಬದ್ಧತೆ, ಇಚ್ಛಾಶಕ್ತಿ ಯಾರಿಗೂ ಇಲ್ಲ. ಕೆರೆಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗುವುದರೊಂದಿಗೆ ಕೊಳವೆ ಬಾವಿಗಳು ಪುನಶ್ಚೇತನ ಗೊಂಡರೆ ನೀರಿನ ಸಮಸ್ಯೆ ಭಾಗಶಃ ಕಡಿಮೆಯಾಗುತ್ತದೆ.

Advertisement

ಆ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕಾರ್ಯಕ್ರಮ ರೂಪುಗೊಳ್ಳುತ್ತಿಲ್ಲ. ಇದರ ಪರಿಣಾಮ ನೀರಿನ ಬವಣೆ ಪ್ರತಿ ವರ್ಷ ರೈತರನ್ನು ಬೆಂಬಿಡದೆ ಕಾಡುತ್ತಿದೆ. ಬೇಸಿಗೆ ಅವಧಿಯಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡುವ ಕಾರ್ಯಕ್ರಮವನ್ನೂ ಜಿಲ್ಲಾಡಳಿತ ಅಥವಾ ಜಿಲ್ಲಾ ಪಂಚಾಯಿತಿ ಕೈಗೆತ್ತಿಕೊಳ್ಳುತ್ತಿಲ್ಲ. 2019ಅನ್ನು ಜಲಾಮೃತ ವರ್ಷವನ್ನಾಗಿ ಆಚರಿಸಲಾಗುತ್ತಿದ್ದರೂ ರೈತರಿಗೆ ಅನುಕೂಲ ವಾಗುವಂತೆ, ಕೃಷಿಗೆ ನೀರಿನ ಕೊರತೆ ನೀಗಿಸುವ ದೃಷ್ಟಿಯಿಂದ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸದಿರುವುದು ದೊಡ್ಡ ದುರಂತದ ಸಂಗತಿಯಾಗಿದೆ.

ಬದುಕನ್ನು ಕಟ್ಟಿ,ಕೊಳ್ಳಲು ರೈತರು ಸಾಲ ಮಾಡಿ ಬೆಳೆ ಬೆಳೆಯುವುದಕ್ಕೆ ಮುಂದಾದರೂ ಯಾವುದೇ ಮೂಲದಿಂದಲೂ ಅವರಿಗೆ ನೀರು ಸಿಗುತ್ತಿಲ್ಲ. ಕೆಆರ್‌ಎಸ್‌ ಅಣೆಕಟ್ಟೆ ನೀರಿಗೆ ನೀರು ನಿರ್ವಹಣಾ ಪ್ರಾಧಿಕಾರದ ಬೇಕು ಅಂತಾರೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬರಡಾಗಿವೆ. ಕೊಳವೆ ಬಾವಿಗಳು ಬತ್ತಿಹೋಗಿವೆ, ಅಂತರ್ಜಲ ಪಾತಾಳ ಸೇರಿಕೊಂಡಿದೆ. ಹಾಗಾದರೆ ಬೆಳೆ ಬೆಳೆಯಲು ನೀರು ದೊರಕುವುದಾದರೂ ಎಲ್ಲಿಂದ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಮಳೆ ಬಿದ್ದರಷ್ಟೇ ಕೃಷಿ. ಇಲ್ಲದಿದ್ದರೆ ಎಲ್ಲವೂ ಹುಸಿ ಎಂಬಂತಾಗಿದೆ ರೈತರ ಬಾಳು. ಜಲಸಂಪತ್ತನ್ನು ಸಂರಕ್ಷಿಸುವ ದಿಕ್ಕಿನಲ್ಲಿ ಆಲೋಚನೆಗಳು ಸಾಗದಿದ್ದರೆ ಅನ್ನದಾತರ ಆತ್ಮಹತ್ಯೆಗೆ ಕೊನೆಯೇ ಇರುವುದಿಲ್ಲ.

ಕಳೆದ ವಾರದಲ್ಲೇ ಮೂವರು ರೈತರ ಆತ್ಮಹತ್ಯೆ:

ರೈತರ ಆತ್ಮಹತ್ಯೆ ನಿರಂತರವಾಗಿ ನಡೆದಿದೆ. ಕಳೆದೊಂದು ವಾರದಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ ವರದಿಯಾಗುತ್ತಿರುವ ರೈತರ ಆತ್ಮಹತ್ಯೆ ಸಂಖ್ಯೆಗೂ, ವಾಸ್ತವದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಸಂಖ್ಯೆಗೂ ಹೋಲಿಕೆಯೇ ಆಗುತ್ತಿಲ್ಲ. ರೈತರ ಆತ್ಮಹತ್ಯೆ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿ ನಂತರ ಅದು ಉಪವಿಭಾಗಾಧಿಕಾರಿ ಸಮಿತಿಯ ಮುಂದೆ ಬರುವ ಪ್ರಕರಣಗಳನ್ನಷ್ಟೇ ಪರಿಗಣಿಸಲಾಗುತ್ತಿದೆ. ಆದರೆ, ಎಷ್ಟೋ ರೈತರ ಆತ್ಮಹತ್ಯೆ ಪ್ರಕರಣಗಳು ಸದ್ದಿಲ್ಲದೆ ಮಣ್ಣಾಗುತ್ತಿವೆ. ಅವುಗಳಿಗೆ ಲೆಕ್ಕ ಇಡುವವರೇ ಇಲ್ಲವಾಗಿದೆ.
● ಮಂಡ್ಯ ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next