ಮೈಸೂರು: ಕಾವೇರಿ ನದಿಯ ಪುನಃಶ್ಚೇತನಕ್ಕಾಗಿ ಈಶಾ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು “ಕಾವೇರಿ ಕೂಗು’ ಎಂಬ ಬೃಹತ್ ಉಪಕ್ರಮವನ್ನು ಆರಂಭಿಸಿದ್ದು, ಈ ಸಂಬಂಧ ಜನರಿಗೆ ಅರಿವು ಮೂಡಿಸಲು ಕಾವೇರಿ ಉಗಮ ಸ್ಥಾನದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಈಶ ಫೌಂಡೇಷನ್‌ನ ಸ್ವಯಂ ಸೇವಕ ಬಿ.ಎಸ್.ಸುಬ್ರಹ್ಮಣ್ಯ ತಿಳಿಸಿದರು.
ಸೆಪ್ಟೆಂಬರ್ 3 ರಂದು ಕಾವೇರಿ ಉಗಮ ಸ್ಥಾನ ತಲಾಕಾವೇರಿಯಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ತಮಿಳುನಾಡಿನ ಪೂಂಪುಹಾರದಲ್ಲಿರುವ ತಿರುವಾವುರ್ ಮೂಲಕ ಹಾದು ಚೆನ್ನೈನಲ್ಲಿ ಮುಕ್ತಾಯಗೊಳ್ಳಲಿದೆ. ಸದ್ಗುರು ಜಗ್ಗಿ ವಾಸುದೇವ ಸೇರಿದಂತೆ 20 ಜನರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಸುಮಾರು 1,500 ಕಿ.ಮೀ. ಪ್ರಯಾಣವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೃಹತ್ ಕಾರ್ಯಕ್ರಮ: ರ್ಯಾಲಿಯ ಭಾಗವಾಗಿ ದಾರಿಯುದ್ದಕ್ಕೂ ಹಲವು ಬೃಹತ್ ಕಾರ್ಯಕ್ರಮಗಳು ನಡೆಯಲಿದ್ದು, ಸದ್ಗುರು ಅವರು ಸಾರ್ವಜನಿಕರಿಗೆ ಕಾವೇರಿ ಕೂಗು ಬಗ್ಗೆ ತಿಳಿಸಿಕೊಡಲಿದ್ದಾರೆ. ಸೆಪ್ಟೆಂಬರ್ 3 ರಂದು ಮಧ್ಯಾಹ್ನ 3.30ಕ್ಕೆ ಮಡಿಕೇರಿಯ ಸುದರ್ಶನ್ ಸರ್ಕಲ್ ಹತ್ತಿರದಲ್ಲಿರುವ ಕ್ರಿಸ್ಟಲ್ ಹಾಲ್‌ನಲ್ಲಿ, ಸೆ.4 ರಂದು ಸಂಜೆ 4 ಗಂಟೆಗೆ ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕನ್ವೆನ್ಶನ್ ಹಾಲ್‌ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದರು.
ಸೆಪ್ಟೆಂಬರ್ 5 ರಂದು ಸಂಜೆ 6 ಗಂಟೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ , 6 ರಂದು ಸಂಜೆ 4 ಗಂಟೆಗೆ ಮಂಡ್ಯದ ಅಂಬೇಡ್ಕರ್ ಭವನ ಹಾಗೂ 8 ರಂದು ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸಸಿ ವಿತರಣಾ ಕೇಂದ್ರ: ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೆ ಸೇರಿದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಾವೇರಿ ಕೂಗು ಬೃಹತ್ ಉಪಕ್ರಮದ ಮೂಲಕ 242 ಕೋಟಿ ಮರಗಳನ್ನು ಬೆಳೆಸುವುದಕ್ಕೆ ರೈತರನ್ನು ಸಶಕ್ತಗೊಳಿಸಲಾಗುತ್ತಿದೆ. ಕಳೆದ 40 ವರ್ಷಗಳ ಅವಧಿಯಲ್ಲಿ ಶೇ.46 ರಷ್ಟು ಕಾವೇರಿ ನದಿ ಬತ್ತಿ ಹೋಗಿದೆ. 83 ಸಾವಿರ ಚ.ಕಿ.ಮೀ. ವ್ಯಾಪ್ತಿಯಲ್ಲಿ ಕಾವೇರಿ ನದಿ ಹರಿಯುತ್ತಿದೆ.
ರಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ 40-50 ವರ್ಷದಿಂದೀಚೆಗೆ ಭೂಮಿಯನ್ನು ಹಾಳು ಮಾಡಲಾಗಿದೆ. ಇದರಿಂದ 10.2 ಕೋಟಿ ಹೆಕ್ಟೇರ್ ಭೂಮಿ ವಿನಾಶದ ಹಂಚಿನಲ್ಲಿದೆ. ಮುಂದಿನ 4 ವರ್ಷಗಳ ಅವಧಿಯಲ್ಲಿ 72 ಕೋಟಿ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ರೈತರಿಂದ 25-30 ಕಿ.ಮೀ. ವ್ಯಾಪ್ತಿಯಲ್ಲಿ ಸಸಿಗಳ ವಿತರಣಾ ಕೇಂದ್ರ ಸ್ಥಾಪನೆ ಮಾಡಿ ಸಸಿಗಳನ್ನು ವಿತರಣೆ ಮಾಡಲಾಗುವುದು. ಇದಕ್ಕೆ ರೈತರು ಯಾವುದೇ ಹಣ ಕೊಡಬೇಕಿಲ್ಲ ಎಂದು ತಿಳಿಸಿದರು.
ದೇಣಿಗೆ: ಈ ಪ್ರಚಾರ ಕಾರ್ಯಕ್ರಮ ಕಾವೇರಿ ನದಿ ಹರಿಯುವ ಜಿಲ್ಲೆಗಳನ್ನು ವ್ಯಾಪಿಸಿದ್ದು ಈಗಾಗಲೇ 5 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಮುಟ್ಟಿ 2.70 ಲಕ್ಷ ರೈತರನ್ನು ತಲುಪಿದೆ. ಜನರು ಒಂದು ಮರಕ್ಕೆ 42 ರೂ. ದೇಣಿಗೆಯನ್ನು ಕಾವೇರಿ ಕೂಗು ಅಭಿಯಾನದ ವೆಬ್‌ಸೈಟ್ ಮೂಲಕ ನೀಡಬಹುದು. ಕಾವೇರಿ ಕೂಗಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದು, ರೈತರಿಗೆ ಸಬ್ಸಿಡಿ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು ತಿಳಿಸಿದರು.