Advertisement

ಬೆಳ್ತಂಗಡಿ ಏತ ನೀರಾವರಿಗೆ  240 ಕೋ.ರೂ.

10:44 PM Jul 15, 2021 | Team Udayavani |

ಬೆಳ್ತಂಗಡಿ: ಬಂದಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊಗ್ರು-ಮುಗೈರಡ್ಕದಲ್ಲಿ ಬೃಹತ್‌ ಸೇತುವೆ ಸಹಿತ ಏತ ನೀರಾವರಿ ಯೋಜನೆ ಕಾರ್ಯಗತಗೊಳ್ಳಲಿದೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 240 ಕೋಟಿ ರೂ. ಅನುದಾನ ಘೋಷಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಬೃಹತ್‌ ಕೊಡುಗೆ ನೀಡಿದ್ದಾರೆ.

Advertisement

ಮೊಗ್ರು-ಮುಗೈರಡ್ಕ ತೂಗುಸೇತುವೆ 2019ರ ಆಗಸ್ಟ್ ನಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿತ್ತು. ಎರಡು ಊರುಗಳ ಸಂಪರ್ಕ ಕಡಿತಗೊಂಡು ಮೂರು ವರ್ಷ ಸಮೀಪಿಸುತ್ತಿದೆ. ಅಲ್ಲಿ ಶಾಶ್ವತ ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿಬಂದಿತ್ತು. ಸೇತುವೆ ಜತೆಗೆ ಊರಿನ ಅಭಿವೃದ್ಧಿಗೆ ಶಾಶ್ವತ ಕೊಡುಗೆ ನೀಡಬೇಕೆಂಬುದು ಶಾಸಕ ಹರೀಶ್‌ ಪೂಂಜ ಅವರ ಚಿಂತನೆಯಾಗಿತ್ತು. 2019ರ ಪ್ರವಾಹಕ್ಕೆ ಮುನ್ನ ದ.ಕ. ಜಿಲ್ಲೆ ಸಹಿತ ಬೆಳ್ತಂಗಡಿ ತಾಲೂಕು ಬರಗಾಲಕ್ಕೆ ತುತ್ತಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೃಷಿಕರಿಗೆ ಬೇಸಗೆಯಲ್ಲಿ ನೀರಿನ ಅಭಾವ ತಪ್ಪಿಸಲು ಹಾಗೂ ನೇತ್ರವತಿ ನದಿಗೆ ಏತ ನೀರಾವರಿ ಯೋಜನೆ ಅನುಷ್ಠಾನದ ವಿಚಾರವಾಗಿ ಶಾಸಕರು ಸರಕಾರದೊಂದಿಗೆ ಚರ್ಚಿಸಿದ್ದರು. ಅದರಂತೆ 2020ರ ಜೂನ್‌ನಲ್ಲಿ ಡಿಪಿಆರ್‌ ನಡೆಸಲು 40 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್‌ ಕರೆದು ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ಹಸುರು ನಿಶಾನೆ ತೋರಿ 240 ಕೋ.ರೂ. ಬೃಹತ್‌ ಅನುದಾನ ಘೋಷಿಸುವ ಮೂಲಕ ಬೃಹತ್‌ ನೀರಾವರಿ ಇಲಾಖೆಯಡಿ ದ.ಕ. ಜಿಲ್ಲೆಗೆ “ಬೆಳ್ತಂಗಡಿ ಏತ ನೀರಾವರಿ’ ಮೂಲಕ ಅನುದಾನ ಲಭ್ಯವಾಗಿದೆ.

10ಕ್ಕೂ ಹೆಚ್ಚು ಗ್ರಾಮಕ್ಕೆ ಪ್ರಯೋಜನ:

ನೇತ್ರಾವತಿ ಅಂಚಿನಲ್ಲಿರುವ ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಜನತೆಗೆ ಅನುಕೂಲವಾಗಲಿದೆ. ಏತನೀರಾವರಿಯಿಂದ ಪ್ರಮುಖವಾಗಿ ಬಂದಾರು, ಇಳಂತಿಲ, ಮೊಗ್ರು, ಮುಗೈರಡ್ಕ, ಕಣಿಯೂರು, ಉರುವಾಲು, ಕಳಿಯ, ನ್ಯಾಯತರ್ಪು, ಕುವೆಟ್ಟು, ಓಡಿಲ್ನಾಳ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಕೃಷಿಕರಿಗೆ ಬೇಸಗೆಯಲ್ಲೂ ನೀರು ಲಭ್ಯವಾಗಲಿದೆ.

Advertisement

ಜತೆಗೆ ಅಂತರ್ಜಲ ವೃದ್ಧಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಿಹಿ ಹಂಚಿ ಸಂಭ್ರಮ ದ.ಕ. ಜಿಲ್ಲೆಯ ಇತಿಹಾಸದಲ್ಲೇ ದೊಡ್ಡ  ನೀರಾವರಿ ಯೋಜನೆ ಮೊಗ್ರು ಗ್ರಾಮದ ಮುಗೈರಡ್ಕಕ್ಕೆ ಬಂದ ಖುಷಿಯಲ್ಲಿ ಕಾರ್ಯ ಕರ್ತರು, ಗ್ರಾಮಸ್ಥರು ಸೇರಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಏತ ನೀರಾವರಿ ಪ್ರಯೋಜನ :

ತುಂಗಭದ್ರಾ ನದಿ ಮೂಲಕ ನೀರನ್ನೆತ್ತಿ ಕೆರೆ ಹಾಗೂ ಚೆಕ್‌ ಡ್ಯಾಂಗಳನ್ನು ತುಂಬಿಸಿ, ಕೃಷಿ ಹಾಗೂ ಕುಡಿಯುವ ನೀರು ಒದಗಿಸಿದಂತೆ ದ.ಕ. ಜಿಲ್ಲೆಯಲ್ಲಿ ಮೊಟ್ಟಮೊದಲ ಬೃಹತ್‌ ಯೋಜನೆಯೊಂದು ಅನುಷ್ಠಾನಗೊಳ್ಳಲಿದೆ. ಇದು ನೇತ್ರಾವತಿ ಅಂಚಿನಲ್ಲಿರುವ ಕೃಷಿ ಸೇರಿದಂತೆ ಅಂತರ್ಜಲ ವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ವರ್ಷದ 365 ದಿನವೂ ನೀರು ಲಭ್ಯವಾಗಲಿದೆ.

ದ.ಕ. ಜಿಲ್ಲೆಗೆ ನೀರಾವರಿ ಯೋಜನೆಯ ಬೇಡಿಕೆಯಂತೆ ಸಂಸದ ನಳಿನ್‌ ಕುಮಾರ್‌ಕಟೀಲು ಅವರ ಎತ್ತಿನ ಹೊಳೆಯ ಹೋರಾಟದ ಫಲವಾಗಿ, ಪಶ್ಚಿಮ ವಾಹಿನಿ ಯೋಜನೆಯಡಿ 4,000 ಕೋ.ರೂ. ಅನುದಾನ, ಇದೀಗ ಬೃಹತ್‌ ನೀರಾವರಿ ಇಲಾಖೆಯಡಿ ನೇತ್ರಾವತಿ ನದಿಗೆ ಬೆಳ್ತಂಗಡಿ ಏತನೀರಾವರಿ ಯೋಜನೆಗೆ 240 ಕೋ.ರೂ. ಘೋಷಿಸುವ ಮೂಲಕ ದ.ಕ. ಜಿಲ್ಲೆಯನ್ನು ಸಮೃದ್ಧ ನೀರಾವರಿಯಾಗಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೊಡುಗೆ ಆವಿಸ್ಮರಣೀಯ.– ಹರೀಶ್‌ ಪೂಂಜ,  ಬೆಳ್ತಂಗಡಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next