Advertisement

24 ಗಂಟೆ ಹೆದ್ದಾರಿಗಸ್ತು ವಾಹನ ಸೇವೆ

09:54 AM Oct 10, 2018 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಗೆ 9 ಹೆಚ್ಚುವರಿ ಹೆದ್ದಾರಿ ಗಸ್ತು ವಾಹನಗಳು ಸೇರ್ಪಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಹೆದ್ದಾರಿ ಗಸ್ತು ವಾಹನಗಳ ಸಂಖ್ಯೆ 15ಕ್ಕೆ ತಲುಪಿದೆ. ಇದರಿಂದ ದಿನದ 24 ಗಂಟೆ ಕಾಲವೂ ಹೆದ್ದಾರಿ ಪೊಲೀಸ್‌ ಗಸ್ತು ಕಾರ್ಯಾಚರಣೆ ಸೇವೆ ಒದಗಿಸಲು ಪೊಲೀಸರಿಗೆ ಸಾಧ್ಯವಾಗಿದೆ.

Advertisement

ಮಂಗಳೂರು ಪೊಲೀಸ್‌ ಕಮಿಷನರೆಟ್‌ಗೆ 3 ಮತ್ತು ದ. ಕ.ಜಿಲ್ಲಾ ಪೊಲೀಸ್‌ಗೆ 6 ಹೊಸ ಹೈವೇ ಪೆಟ್ರೋಲಿಂಗ್‌ ವಾಹನಗಳು ಇತ್ತೀಚೆಗೆ ಸೇರ್ಪಡೆಗೊಂಡಿವೆ. ಇದೀಗ ಮಂಗಳೂರಿನಲ್ಲಿ 4 ಹಾಗೂ ಜಿಲ್ಲಾ ಪೊಲೀಸ್‌ನಲ್ಲಿ 11 ವಾಹನಗಳಿವೆ.

ಮಂಗಳೂರು ಪೊಲೀಸ್‌ ಕಮಿಷನರೆಟ್‌ನ 19 ಪೊಲೀಸ್‌ ಠಾಣೆಗಳ ವ್ಯಾಪ್ತಿಗೆ ಈ ಹಿಂದೆ ಒಂದೇ ಹೆದ್ದಾರಿ ಗಸ್ತು ವಾಹನವಿತ್ತು. ಕಮಿಷನರೆಟ್‌ ವ್ಯಾಪ್ತಿಯ 109373 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ಯಾವುದೇ ಘಟನೆ ಸಂಭವಿಸಿದರೂ ಈ ಒಂದು ವಾಹನ ದೌಡಾಯಿಸಬೇಕಾಗಿತ್ತು. ಇದರಿಂದಾಗಿ ಸಕಾಲದಲ್ಲಿ ಘಟನಾ ಸ್ಥಳಕ್ಕೆ ತಲುಪಿ ಸೇವೆ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ.

ಈಗ ಮೂರು ಹೊಸ ವಾಹನಗಳು ಸೇರ್ಪಡೆಗೊಂಡಿದ್ದು, ಅವುಗಳ ಸಿಬಂದಿ ಪಾಳಿಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ದಿನದ 24 ಗಂಟೆ ಕಾಲವೂ ಸೇವೆ ಲಭ್ಯವಿದೆ.

ಈ ನಾಲ್ಕು ವಾಹನಗಳು (1) ಕೊಟ್ಟಾರದಿಂದ ಸುರತ್ಕಲ್‌ ತನಕ ಹಾಗೂ ಕೂಳೂರು- ಕಾವೂರು ರಸ್ತೆಯಲ್ಲಿ (2) ಕೊಟ್ಟಾರ- ಕೆಪಿಟಿ- ವಿಮಾನ ನಿಲ್ದಾಣ ರಸ್ತೆ, (3) ನಂತೂರು- ಕುಲಶೇಖರ- ಫರಂಗಿಪೇಟೆ, (4) ನಂತೂರು- ಪಂಪ್‌ವೆಲ್‌- ತಲಪಾಡಿ ರಸ್ತೆಯಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಿವೆ. ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ನೆರವು ಒದಗಿಸುತ್ತವೆ. 

Advertisement

ಜಿಲ್ಲಾ ಪೊಲೀಸ್‌ ವ್ಯಾಪ್ತಿಯು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳನ್ನು ಒಳಗೊಂಡಿದ್ದು, ವಿಶಾಲವಾಗಿದೆ. ಇಲ್ಲಿ ಈ ಹಿಂದೆ 5 ಹೆದ್ದಾರಿ ಗಸ್ತು ವಾಹನಗಳಿದ್ದು, 6 ಹೊಸ ವಾಹನಗಳ ಸೇರ್ಪಡೆಯೊಂದಿಗೆ ಒಟ್ಟು 11 ಹೆದ್ದಾರಿ ಗಸ್ತು ವಾಹನಗಳನ್ನು ಹೊಂದಿದಂತಾಗಿದೆ. ಈ ಪೈಕಿ 6 ವಾಹನಗಳನ್ನು ಟ್ರಾμಕ್‌ಗೆ ಹಾಗೂ 5 ವಾಹನಗಳನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಮೀಸಲಿರಿಸಲಾಗಿದೆ. ಇದಲ್ಲದೆ 5 ರಾಣಿ ಅಬ್ಬಕ್ಕ ಪಡೆಯ ವಾಹನಗಳು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೆರವಾಗುತ್ತಿವೆ.

ಇನ್ನೂ ಒಂದು ವಾಹನ ಬೇಕು
ಮೂಲ್ಕಿ- ಕಿನ್ನಿಗೋಳಿ- ಮೂಡಬಿದಿರೆ ಮಾರ್ಗದಲ್ಲಿ ಮತ್ತು ನಂತೂರು- ಮೂಡಬಿದಿರೆ ಮಾರ್ಗದಲ್ಲಿ ಸೇವೆ ಒದಗಿಸಲು ಇನ್ನೂ ಎರಡು ವಾಹನಗಳ ಆವಶ್ಯಕತೆ ಇದೆ ಎನ್ನುವುದು ಹಿರಿಯ ಪೊಲೀಸ್‌ ಅಧಿಕಾರಿಗಳ ಬೇಡಿಕೆ (ಈಗ ಸುರತ್ಕಲ್‌- ಮೂಲ್ಕಿ ಮಾರ್ಗದಲ್ಲಿ ಇಂಟರ್‌ ಸೆಪ್ಟರ್‌ ಕಾರ್ಯನಿರ್ವಹಿಸುತ್ತಿದೆ). 

ವಾಹನದಲ್ಲಿ ಏನೇನಿದೆ?
ಎ.ಸಿ.,ಸ್ವಯಂ ಚಾಲಿತ ವೀಡಿಯೋ ಕೆಮರಾ, ಅಪಘಾತದ ಗಾಯಾಳುಗಳನ್ನು ಸಾಗಿಸುವ ಸ್ಟ್ರೆಚರ್‌, ಟ್ರಾಫಿಕ್‌ ಜಾಂ ಅಥವಾ ಇತರ ಅಡೆ ತಡೆಗಳನ್ನು ತೆರವುಗೊಳಿಸುವ ಉಪಕರಣಗಳು, ರೆಡಿಮೇಡ್‌ ಬ್ಯಾರಿಕೇಡ್‌, ರೊಟೇಶನ್‌ ಸೌಲಭ್ಯದ ಕೆಮರಾ, ಪ್ರಥಮ ಚಿಕಿತ್ಸೆ ಸೌಲಭ್ಯ, ಎಲ್ಲ ಆಸ್ಪತ್ರೆಗಳ ಮತ್ತು ಆ್ಯಂಬುಲೆನ್ಸ್‌ ವಾಹನಗಳ ಫೋನ್‌ ನಂಬರ್‌ ಮತ್ತು ಅಗ್ನಿ ಶಾಮಕ ಸೇವೆ, ಮೆಸ್ಕಾಂ, ಅರಣ್ಯ ಇಲಾಖೆಯ ಅಧಿಕಾರಿಗಳ ಸಂಪರ್ಕ ನಂಬರ್‌ ಈ ವಾಹನದಲ್ಲಿದೆ. ಓರ್ವ ಎಎಸ್‌ಐ, ಗೃಹ ರಕ್ಷಕ ಸಿಬಂದಿ ಹಾಗೂ ಚಾಲಕ ಸಹಿತ ಮೂರು ಮಂದಿ ಈ ವಾಹನದಲ್ಲಿರುತ್ತಾರೆ.

24 ಗಂಟೆ ಸೇವೆ
ಜಿಲ್ಲಾ ಪೊಲೀಸ್‌ಗೆ 6 ಹೊಸ ಹೆದ್ದಾರಿ ಗಸ್ತು ವಾಹನಗಳು ಸೇರ್ಪಡೆಗೊಳ್ಳುವುದರೊಂದಿಗೆ ಒಟ್ಟು 11 ವಾಹನಗಳು ಲಭ್ಯವಿದ್ದು, ಸಾರ್ವಜನಿಕರಿಗೆ ದಿನದ 24 ಗಂಟೆಯೂ ಸೇವೆ ಒದಗಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ಘಟನೆ ಸಂಭವಿಸಿದರೂ ತತ್‌ಕ್ಷಣ ಧಾವಿಸಲು ಅನುಕೂಲವಾಗಿದೆ. ಅಪಘಾತದ ಸಂದರ್ಭದಲ್ಲಿ ಗಾಯಾಳುಗಳನ್ನು ಅತಿ ಶೀಘ್ರದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿ ಪ್ರಾಣ ಹಾನಿಯನ್ನು ತಪ್ಪಿಸಲು ಈ ವಾಹನಗಳು ಸಹಾಯಕವಾಗಲಿವೆ.
ಡಾ| ರವಿಕಾಂತೇ ಗೌಡ,
  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 

ಕೇಸು ದಾಖಲಿಸುವ ಅಧಿಕಾರ
ಈ ವಾಹನಗಳಿಂದ ರಾತ್ರಿ ವೇಳೆ ಹೆಚ್ಚು ಪ್ರಯೋಜನವಾಗಲಿದೆ. ಅಪಘಾತದ ಸಂದರ್ಭದಲ್ಲಿ ಮಾತ್ರವಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಈ ವಾಹನಗಳು ನೆರವಾಗಲಿವೆ. ಇದರಲ್ಲಿರುವ ಸಿಬಂದಿಗೆ ಕೇಸು ದಾಖಲಿಸುವ ಅಧಿಕಾರವೂ ಇದೆ. ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಹೆದ್ದಾರಿ ಗಸ್ತು ವಾಹನಗಳ ಹೊರತಾಗಿ ಈಗಾಗಲೇ 26 ಸಾಗರ್‌ ವಾಹನಗಳು ಮತ್ತು 3 ಇಂಟರ್‌ ಸೆಪ್ಟರ್‌ ವಾಹನಗಳಿವೆ.
– ಮಂಜುನಾಥ ಶೆಟ್ಟಿ,
ಎಸಿಪಿ, ಟ್ರಾಫಿಕ್‌, ಮಂಗಳೂರು. 

 ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next