ಮಂಗಳೂರು: ಉಳ್ಳಾಲದ ಸಮುದ್ರದಲ್ಲಿ ಮುಳುಗಡೆಯಾಗುತ್ತಿರುವ ಬಾರ್ಜ್‌ನಿಂದ ಮುಂದಿನ 24 ಗಂಟೆ ಯೊಳಗಡೆ ಇಂಧನ ತೆರವು(ಡಿಪ್ಯುಯೆಲ್)ಗೊಳಿಸು ವಂತೆ ಬಾರ್ಜ್ ಕಂಪೆನಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ತಿಳಿಸಿದ್ದಾರೆ.
ಮಂಗಳವಾರ “ಉದಯವಾಣಿ’ಯ ಜತೆ ಮಾತನಾಡಿದ ಅವರು, ಸಮುದ್ರದಲ್ಲಿ ತಡೆಗೋಡೆ ನಿರ್ಮಾಣ ಗುತ್ತಿಗೆ ಪಡೆದವರ ಹಾಗೂ ಜಿಲ್ಲಾಡಳಿತ ನೇತೃತ್ವದ ತಜ್ಞರ ತಂಡ ಸ್ಥಳಕ್ಕೆ ತೆರಳಿ ಮುಳುಗಡೆ ಭೀತಿಯಲ್ಲಿರುವ ಬಾರ್ಜ್‌ನಲ್ಲಿರುವ ಇಂಧನದ ಪ್ರಮಾಣ ಪರಿಶೀಲಿಸಿದೆ. ಜಲಚರ ಹಾಗೂ ಪರಿಸರದ ಹಿತದೃಷ್ಟಿಯಿಂದ ಕೂಡಲೇ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದರು.
ಸಮುದ್ರದ ಅಲೆಗಳ ರಭಸವನ್ನು ದುರ್ಬಲಗೊಳಿಸಲು ತಡೆಗೋಡೆ (ರೀಫ್) ನಿರ್ಮಿಸಲಾಗುತ್ತಿದೆ. ಈಗ ಬಾರ್ಜ್ ತಡೆಗೋಡೆಯ ಮೇಲೆ ನಿಂತಿದ್ದರೂ ಮೇಲ್ನೋಟಕ್ಕೆ ತಡೆ ಗೋಡೆಗೆ ಹಾನಿಯಾದಂತಿಲ್ಲ. ತಡೆ ಗೋಡೆಗೆ ಹಾನಿಯಾಗಬಹುದು ಎಂದು ಎಡಿಬಿ ಅಧಿಕಾರಿ ಗಳೂ ಯಾವುದೇ ವರದಿ ನೀಡಿಲ್ಲ. ತಡೆಗೋಡೆಗೆ ಹಾನಿಯಾಗಿ ರುವ ಬಗ್ಗೆ ವರದಿ ಬಂದಲ್ಲಿ, ಬಾರ್ಜ್ ಮಾಲಕರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದರು.
ಮುಳುಗುತ್ತಿರುವ ಬಾರ್ಜನ್ನು ರಕ್ಷಿಸುವಂತೆ ಸೂಚನೆ ನೀಡಿದ್ದರೂ ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ನೋಡಬೇಕಿದೆ. ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಬಾರ್ಜ್ ಸಮೀಪ ಹೋಗುವುದೇ ಅಪಾಯಕಾರಿ. ಎಲ್ಲವನ್ನೂ ಪರಿಶೀಲಿಸಿ ಯಾವ ರೀತಿಯ ಕಾರ್ಯಾಚರಣೆ ಕೈಗೊಳ್ಳುವುದು ಎಂಬ ಬಗ್ಗೆ ಸಂಬಂಧಪಟ್ಟವರ ಜತೆಗೆ ಚರ್ಚಿಸಲಾಗುತ್ತಿದೆ. ಇದೇ ಕಾರಣಕ್ಕೆ ಮೊದಲು ಬಾರ್ಜ್‌ನ ಇಂಧನ ತೆರವಿಗೆ ಆದ್ಯತೆ ನೀಡಲಾಗಿದೆ. ಆ ಬಳಿಕ ಬಾರ್ಜನ್ನು ಮೇಲೆತ್ತುವ ಬಗ್ಗೆ ಗಮನಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.