Advertisement
ಜ್ಞಾನಾರ್ಜನೆಗೆ ಕೊನೆಯೆಂಬುದಿಲ್ಲ. ಹುಟ್ಟಿನಿಂದ ಸಾವಿನ ತನಕವೂ ನಾವು ಹೊಸತನ್ನು ಕಲಿಯುತ್ತಲೇ ಹೋಗುತ್ತೇವೆ. ಕೆಲವನ್ನು ನೋಡಿ, ಕೆಲವನ್ನು ಮಾಡಿ, ಕೆಲವನ್ನು ಓದಿ ಕಲಿಯುತ್ತೇವೆ. ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಪರಿಪೂರ್ಣ ಎನಿಸುವುದು. ಏಕೆಂದರೆ ಜ್ಞಾನಾರ್ಜನೆಯಲ್ಲಿ ಸಂಶಯಗಳು, ಪ್ರಶ್ನೆಗಳು ಉದ್ಭವಿಸುವುದು ಸಹಜ. ಅಲ್ಲದೆ, ಕೆಲವೊಂದು ಉದಾಹರಣೆ, ಸನ್ನಿವೇಶಗಳ ಮೂಲಕ ಕಲಿಯುವ ಅಗತ್ಯವಿರುವುದರಿಂದ ಗುರುವೊಬ್ಬನು ಇರಲೇಬೇಕು.
Related Articles
ಬದುಕಿನ ಪ್ರತಿಯೊಂದು ಘಟ್ಟವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಮತ್ತು ನಾವು ಅದರಿಂದ ಪ್ರೌಢರಾಗುತ್ತ ಹೋಗುತ್ತೇವೆ. ನಾವು ಒಡಾಡುವ ಈ ನೆಲವೂ ನಮಗೇ ಪಾಠ ಹೇಳುವ ಗುರುವೇ ಆಗಿದೆ! ಪೃಥ್ವಿ ಅಥವಾ ಭೂಮಿಯಿಂದಲೂ ನಾವು ಪಡೆಯಬೇಕಾದ ಜ್ಞಾನ ಅಥವಾ ತಿಳುವಳಿಕೆ ಸಾಕಷ್ಟಿವೆ. ಭೂಮಿ ಎಂಬುದು ಕ್ಷಮೆಯ ಪ್ರತಿರೂಪವಿದ್ದಂತೆ. ಈ ಭೂಮಿಯಷ್ಟು ಕ್ಷಮಾಗುಣವುಳ್ಳದ್ದು ಇನ್ನೊಂದಿಲ್ಲ. ನಾವು ಭೂಮಿಯನ್ನು ಹೇಗೆ ಬಳಸಿಕೊಂಡರೂ ಅದು ಕೋಪಿಸಿಕೊಳ್ಳುವುದಿಲ್ಲ. ಮತ್ತು ಭೂಮಿಯ ಸಮಸ್ತ ಕ್ರಿಯೆಗಳು ಪರರ ಉಪಕಾರಕ್ಕಾಗಿಯೇ ಇರುತ್ತವೆ.
Advertisement
ಈ ಬಗೆಯ ಕ್ಷಮಾಗುಣವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಪರರಿಂದ ಉಂಟಾಗುವ ಕಷ್ಟವನ್ನು ಸಹಿಸಿಕೊಂಡು ವಿಚಲಿತನಾಗದೆ ವ್ಯವಹರಿಸುವ ಬುದ್ಧಿಯನ್ನು ಬಲವಾಗಿ ಬೆಳೆಸಿಕೊಳ್ಳಬೇಕು. ತಾನು ಮಾಡುವ ಕರ್ಮದಿಂದ ಪರರಿಗೆ ಉಪಕಾರವಾಗುವಂತೆ ಕಾರ್ಯನಿರತನಾಗಬೇಕು. ನಿಂದನೆಗೆ ತಲೆಕೆಡಿಸಿಕೊಳ್ಳದೆ, ಸದಾಚಾರದಲ್ಲಿ ತೊಡಗಿಕೊಳ್ಳಬೇಕು. ಭೂಮಿಯು ಹೇಗೆ ಮಳೆಗೆ, ಬೆಳೆಗೆ, ಹಸಿರಿಗೆ, ಜೀವಿಗೆ ಅನುಕೂಲವಾಗುವಂತೆ ತನ್ನನ್ನು ತಾನು ತೊಡಗಿಸಿಕೊಳ್ಳುವುದೋ ಅಂಥ ಮನಸ್ಸನ್ನು ಈ ಭೂಮಿಯನ್ನು ನೋಡಿ ನಮ್ಮಲ್ಲಿ ನಾವು ಬೆಳಸಿಕೊಳ್ಳಬೇಕು. ಭೂಮಿ ಮತ್ತು ಭೂಮಿಯಲ್ಲಿರುವ ವೃಕ್ಷ$ಪರ್ವತಾದಿಗಳೂ ಪರೋಪಕಾರಕ್ಕಾಗಿಯೇ ಇವೆ. ವೃಕ್ಷ$ಕೊಡುವ ಫಲ, ಹೂವು, ಎಲೆ, ಕಟ್ಟಿಗೆ, ಹಸಿರು ಎಲ್ಲವೂ ಪರರಿಗಾಗಿಯೇ. ಅಂತೆಯೇ ಪರ್ವತವೂ ಕೂಡ ಅದೆಷ್ಟೋ ಪಕ್ಷಿ$ ಸಂಕುಲಕ್ಕೆ, ಪ್ರಾಣಿವರ್ಗಕ್ಕೆ ಆಶ್ರಯ ತಾಣವಾಗಿದೆ.
ಈ ಭೂಮಿಯು ಕ್ಷಮಾಗುಣ, ಪರೋಪಕಾರ ಮತ್ತು ಪ್ರತ್ಯುಪಕಾರವನ್ನು ಬಯಸದೇ ಇರುವ ಗುಣದಂಥ ಸುಜ್ಞಾನವನ್ನು ಕೊಡುತ್ತದೆ. ಅದನ್ನು ಅರಿತುಕೊಳ್ಳುವ ರೂಢಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಹಾಗಾಗಿ ಭೂಮಿಯೂ ಒಂದು ಗುರು.
..ಮುಂದುವರಿಯುವುದು.
ವಿಷ್ಣು ಭಟ್ಟ ಹೊಸ್ಮನೆ