ರಾಯಚೂರು: ಸಾಲ ಮನ್ನಾದಂಥ ಮಹತ್ತರ ಯೋಜನೆ ಜಾರಿಯಾದ ಬಳಿಕವೂ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಕಡಿಮೆಯಾಗಿಲ್ಲ. ಕಳೆದ ವರ್ಷ ಎಂಟು ತಿಂಗಳಲ್ಲಿ 24 ರೈತರು ಸಾಲ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
2018ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ಬರೋಬ್ಬರಿ 24 ರೈತರು ಸಾವಿಗೆ ಶರಣಾಗಿದ್ದಾರೆ. ಅದರಲ್ಲಿ 13 ಖಚಿತಗೊಂಡಿದ್ದು, ಸರ್ಕಾರದಿಂದ 5 ಲಕ್ಷ ಪರಿಹಾರ ಕೂಡ ವಿತರಿಸಲಾಗಿದೆ. ಇನ್ನೂ 3 ಸೂಕ್ತ ಕಾರಣಗಳಿಲ್ಲದ್ದಕ್ಕೆ ತಿರಸ್ಕೃತಗೊಂಡರೆ, ಇನ್ನೂ ಎಂಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಮುಖ್ಯಮಂತ್ರಿಗಳು ರೈತರೇ ದುಡುಕಬೇಡಿ ನಾವಿದ್ದೇವೆ ಎಂದು ಸಾಕಷ್ಟು ಬಾರಿ ಭರವಸೆ ನೀಡಿದ್ದಾರೆ. ಆದರೆ, ಸಾಲ ಮನ್ನಾ ಯೋಜನೆ ಈವರೆಗೂ ರೈತರಿಗೆ ತಲುಪದಿರುವುದು ರೈತರ ನಿರಾಸೆಗೆ ಕಾರಣವಾಗುತ್ತಿದೆ.
ನೀರಾವರಿ ಆಶ್ರಿತ ಪ್ರದೇಶವಾದ ಸಿಂಧನೂರು, ಮಾನ್ವಿ ತಾಲೂಕುಗಳು ಆರ್ಥಿಕವಾಗಿಯೂ ಸುಧಾರಣೆ ಕಂಡಿವೆ. ಮುಂಚೆ ಎರಡು ಬೆಳೆ ಬೆಳೆಯುತ್ತಿದ್ದ ರೈತರು ಈಚೆಗಿನ ವರ್ಷಗಳಲ್ಲಿ ನೀರು ಸಿಗದ ಕಾರಣ ಒಂದು ಬೆಳೆ ಭತ್ತ ಬೆಳೆದರೆ, ಎರಡನೇ ಹಗುರ ಬೆಳೆ ಬೆಳೆಯುತ್ತಿದ್ದಾರೆ. ಆದರೂ ಈ ಎರಡೂ ತಾಲೂಕಿನಲ್ಲಿ ತಲಾ 9 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಂಧನೂರಲ್ಲಿ 9ರಲ್ಲಿ ಒಂದು ಪ್ರಕರಣ ತಿರಸ್ಕೃತಗೊಂಡಿದ್ದರೆ ಮೂರು ಇತ್ಯರ್ಥಕ್ಕೆ ಬಾಕಿ ಇವೆ. ಮಾನ್ವಿಯಲ್ಲಿ ಐದು ಕುಟುಂಬಗಳಿಗೆ ಪರಿಹಾರ ನೀಡಿದ್ದು, ಇನ್ನೂ ನಾಲ್ಕು ಪ್ರಕರಣ ಇತ್ಯರ್ಥಕ್ಕೆ ಬಾಕಿ ಇವೆ.
ಖಾಸಗಿ ಸಾಲವೂ ಕಾರಣ: ಮೃತ ರೈತರಿಗೆ ಕೇವಲ ಬ್ಯಾಂಕ್‌ಗಳ ಸಾಲ ಮಾತ್ರವಲ್ಲದೇ ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವೂ ಕಾರಣ ಎನ್ನಲಾಗುತ್ತಿದೆ. ರೈತರು ಬೆಳೆ ಸಾಲದ ಜತೆಗೆ ಪ್ರತಿ ವರ್ಷ ಕೃಷಿ ಚಟುವಟಿಕೆಗೆ ಖಾಸಗಿ ಲೇವಾದೇವಿದಾರರ ಬಳಿ ಹಣ ಪಡೆಯುತ್ತಾರೆ. ಇಲ್ಲವೇ ದಲ್ಲಾಳಿ ಅಂಗಡಿಗಳಲ್ಲಿ ಮುಂಗಡ ಪಡೆದಿರುತ್ತಾರೆ. ಅದರ ಜತೆಗೆ ದಿಢೀರ್ ಎದುರಾಗುವ ಹಬ್ಬ ಹರಿದಿನಗಳು, ಮದುವೆ, ಆಸ್ಪತ್ರೆ ಖರ್ಚುಗಳಿಗೆ ಖಾಸಗಿ ಸಾಲವೇ ಗತಿ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಾರದಿದ್ದಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇದರಿಂದ ರೈತರು ದುಡುಕಿನ ನಿರ್ಧಾರ ಕೈಗೊಳ್ಳುವಂತಾಗಿದೆ.
ಇನ್ನು ಮೃತಪಟ್ಟ ರೈತರಲ್ಲಿ ಕುಟುಂಬದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಪಡೆಯಲು 18 ಮಕ್ಕಳು ಅರ್ಹರಿದ್ದು, ಅವರಿಗೆ ಉಚಿತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಕೈಗೆಟುಕದ ಸೌಲಭ್ಯ: ಸರ್ಕಾರದ ಯಾವೊಂದು ಸೌಲಭ್ಯಗಳು ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ಕಳೆದ ವರ್ಷ ಆಲಿಕಲ್ಲು ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು. ಆದರೆ, ಕೆಲ ರೈತರಿಗೆ ಅದೂ 700-800 ರೂ. ನಂತೆ ಪರಿಹಾರ ನೀಡಲಾಗಿತ್ತು. ಇನ್ನು ಫಸಲ್ ಬಿಮಾ ಯೋಜನೆಯಡಿಯೂ ಇನ್ನೂ 11 ಕೋಟಿ ರೂ. ಬಾಕಿಯಿದೆ ಎಂದು ಜಿಲ್ಲಾಡಳಿತವೇ ಹೇಳಿದೆ. ಏತನ್ಮಧ್ಯೆ ಹೆಚ್ಚುತ್ತಿರುವ ಖರ್ಚುಗಳು, ಕುಸಿಯುತ್ತಿರುವ ಬೆಲೆಗಳು ರೈತರ ಸಾವಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ರೈತ ಮುಖಂಡರು.