ಬೆಂಗಳೂರು: ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ 34 ದಾಳಿಗಳಲ್ಲಿ 24 ದಾಳಿಗಳಲ್ಲಿ ಯಾವುದೇ ಅಕ್ರಮ ಹಣ ಅಥವಾ ಆಸ್ತಿ ಪತ್ತೆಯಾಗಿಲ್ಲ ಎಂದು ಜೆಡಿಎಸ್ ತಿಳಿಸಿದೆ.
ದಾಳಿ ನಡೆಸಿದ್ದ 24 ಕಡೆ ಯಾವುದೇ ಆಸ್ತಿ ಹಾಗೂ ಹಣ ಪತ್ತೆಯಾಗಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಪಾಟೀಲ್, ಎಚ್.ಸಿ ಮಹದೇವಪ್ಪ, ಹಾಲಿ ಸಚಿವ ಎಂಟಿಬಿ ನಾಗರಾಜ ಅವರ ಆಪ್ತರು ಬೆಂಬಲಿಗರ ನಿವಾಸಗಳಲ್ಲಿ ನಡೆದ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಹಣ, ಆಸ್ತಿ ಪತ್ತೆಯಾಗಿಲ್ಲ. ಬಿಜೆಪಿಯು ರಾಜಕೀಯ ದುರುದ್ದೇಶದಿಂದ ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಶಾಸಕ ಆನಂದ್‌ಸಿಂಗ್ ಒಡೆತನದ ಹೆರಿಟೇಜ್ ವಸತಿ ಗೃಹದ ಮೇಲೆ ನಡೆಸಿದ ದಾಳಿಯಲ್ಲಿ ದೊರೆತ 13.80 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದು ಯಾವುದೇ ದಾಖಲೆಗಳಿಲ್ಲ. ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ನಿವಾಸದಲ್ಲಿ 8630 ರೂ. ನಗದು ಹಾಗೂ 2.06 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿತ್ತು.ಜತೆಗೆ, ಹುಬ್ಬಳ್ಳಿಯ ಖಾಸಗಿ ವ್ಯಕ್ತಿಯೊಬ್ಬರ ನಿವಾಸದಲ್ಲಿ 25 ಲಕ್ಷ ರೂ. ಹಣ ಹಾಗೂ 25 ಲಕ್ಷ ರೂ. ಆಸ್ತಿ ಬಗ್ಗೆ ಪರಿಶೀಲನೆ ನಡೆದಿದೆ. ಮಾಜಿ ಶಾಸಕ ಚೆಲುವರಾಯಸ್ವಾಮಿ ಮೂವರು ಆಪ್ತರ ನಿವಾಸಗಳಲ್ಲಿ ನಡೆದ ದಾಳಿಯಲ್ಲಿ 30 ಸಾವಿರ ರೂ. ದೊರೆತಿದ್ದು ಸೂಕ್ತ ದಾಖಲೆಗಳಿದ್ದ ಹಿನ್ನೆಲೆಯಲ್ಲಿ ವಾಪಾಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
ಈ ಕುರಿತು ಹೇಳಿಕೆ ನೀಡಿರುವ ಜೆಡಿಎಸ್ ವಕ್ತಾರ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್ ಬಾಬು, ಅಕ್ರಮ ಆಸ್ತಿ ಅನಧಿಕೃತ ಹಣ ವರ್ಗಾವಣೆ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೆರಿದಂತೆ ಇತರೆ ರಾಜಕೀಯ ಮುಖಂಡರು ಹಾಗೂ ಗುತ್ತಿಗೆದಾರರ ನಿವಾಸಗಳು ಕಚೇರಿಗಳಲ್ಲಿ ರಾಜ್ಯದ ವಿವಿಧೆಡೆ 34 ಕಡೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಪೈಕಿ ಕಾಂಗ್ರೆಸ್ ನಾಯಕರ ಜತೆ ಗುರುತಿಸಿಕೊಂಡಿದ್ದವರಿಗೆ ಸಂಬಂಧಿಸಿದಂತೆ 22 ಕಡೆ, ಜೆಡಿಎಸ್‌ನ ನಾಲ್ಕು, ಬಿಜೆಪಿ ನಾಯಕರು ಆಪ್ತರ ಆರು ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.
Related Articles
‘ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಐಟಿ ದಾಳಿಯಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ಆಪ್ತರ ನಿವಾಸಗಳಲ್ಲಿ ಹಣ ಅಥವಾ ಆಸ್ತಿ ದೊರೆತಿಲ್ಲ. ಇದೇ ಕಾರಣಕ್ಕೆ ಐಟಿ ದಾಳಿಯನ್ನು ಕಾಂಗ್ರೆಸ್-ಜೆಡಿಎಸ್ ಮುಖಂಡರು ವಿರೋಧಿಸಿದ್ದೆವು. 2014ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ, ಐಟಿ ದಾಳಿ ನಡೆದಿರಲಿಲ್ಲ. 2018ಯ ವಿಧಾನಸಭೆ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸಲಾಗಿತ್ತು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
Advertisement